ತುಮಕೂರು: ಚಿಕ್ಕಪ್ಪನೇ 13 ವರ್ಷ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ , ಅಪರಾಧಿಗೆ ಜಿಲ್ಲಾ ಸತ್ರ ನ್ಯಾಯಾಲಯ(FTSC) ಪೋಕ್ಸೋ ನ್ಯಾಯಾಲಯವು 30 ವರ್ಷಗಳ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಹೆಬ್ಬೂರು ಹೋಬಳಿ ಮೇಣಸಂದ್ರ ಗ್ರಾಮದ ನೊಂದ 13 ವರ್ಷದ ಬಾಲಕಿಗೆ ಸಂಬಂಧದಲ್ಲಿ ಚಿಕ್ಕಪ್ಪನಾಗಿರುವ ರಾಕೇಶ್ ಅಲಿಯಾಸ್ ಧನಂಜಯ ಎಂಬಾತ, ಬಾಲಕಿಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ.
ಈ ನಡುವೆ ನೊಂದ ಬಾಲಕಿಯನ್ನು ಲೈಂಗಿಕ ಉದ್ದೇಶದಿಂದ ಮೈ ಮುಟ್ಟಿ, ನಾನು ಹೇಳಿದ ಹಾಗೆ ಕೇಳಬೇಕು. ಇಲ್ಲವಾದರೆ, ನಿನ್ನ ತಂದೆ ತಾಯಿಯನ್ನು ಸಾಯಿಸುತ್ತೇನೆ ಎಂದು ಬೆದರಿಸಿ, ಬಾಲಕಿಯನ್ನು ಮಾವಿನ ತೋಪಿನ ಬಳಿಯ ವ್ಯಕ್ತಿಯೊಬ್ಬರ ಜಮೀನಿಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಲೈಂಗಿಕ ಕಿರುಕುಳದ ವೇಳೆ ಬಾಲಕಿಯ ನಗ್ನ ಚಿತ್ರವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಬಳಿಕ ಬಾಲಕಿಯ ಚಿನ್ನದ ಒಡವೆ ಪಡೆದುಕೊಂಡು, ಆಕೆಯನ್ನು ಹೆದರಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ಈ ಪ್ರಕರಣದ ತನಿಖೆ ನಡೆಸಿದ ಮಹಿಳಾ ಪೊಲೀಸ್ ಠಾಣೆಯ ತನಿಖಾಧಿಕಾರಿಗಳಾದ ರಾಧಾಕೃಷ್ಣ ಟಿ.ಎಸ್. ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿದರು.
ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯ(FTSC) ಪೋಕ್ಸೋ ನ್ಯಾಯಾಲಯವು ಅಪರಾಧಿಗೆ 30 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದ್ದು, ನೊಂದ ಬಾಲಕಿಗೆ 95 ಸಾವಿರ ರೂ. ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ 6 ಲಕ್ಷ ರೂಪಾಯಿ ಸೇರಿಸಿ ಒಟ್ಟು 6.95 ಸಾವಿರ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ವಾದ ಮಂಡಿಸಿದರು.
ವರದಿ: ಶಿವಕುಮಾರ್ ಮೇಷ್ಟ್ರುಮನೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU