ಬೆಂಗಳೂರು: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಿಹಾದಿ ಮಾನಸಿಕತೆಯಲ್ಲಿ ಉನ್ಮಾದ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆರೋಪಿಸಿದರು.
ಟಿ-ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತ, ಹನುಮ ಜಯಂತಿ ಕಾರ್ಯಕ್ರಮದ ಸಂಚಾಲಕ ವೇಣುಗೋಪಾಲ್ ಅವರನ್ನು ಹತ್ಯೆ ಮಾಡಿದ ಸ್ಥಳಕ್ಕೆ ಸತ್ಯಶೋಧನಾ ಸಮಿತಿಯ ಸದಸ್ಯರ ಜೊತೆ ಇಂದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು. ಅಲ್ಲದೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಶಾಸಕ ಮಹಾದೇವಪ್ಪ ಅವರು ಸಾಂತ್ವನ ನುಡಿ ಹೇಳಿಲ್ಲವೇಕೆ ಎಂದು ಆಕ್ಷೇಪಿಸಿದರು. ಇವರು ತುಟಿ ಬಿಟ್ಟಿಲ್ಲ. ಇದು ಆಘಾತಕರ ಸಂಗತಿ ಎಂದು ನುಡಿದರು. ಅವರಿಗೆ ಕೇಸರಿ ಕಂಡರೆ ಆಗದೆ ಇರುವ ಮಾನಸಿಕತೆ ಇದಕ್ಕೆ ಕಾರಣ ಇರಬಹುದು ಎಂದು ತಿಳಿಸಿದರು.
ಸಾವನ್ನು ಖಂಡಿಸುವ, ಸಾವಿನ ಕುಟುಂಬದ ಜೊತೆ ನಿಲ್ಲುವುದರಿಂದಲೂ ಇವರು ದೂರ ಆದರೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯರ ನೆರೆಯ ಕ್ಷೇತ್ರವಿದು ಎಂದು ತಿಳಿಸಿದರು. ವೇಣುಗೋಪಾಲ್ ಕೇಸರಿಯ ನೇತೃತ್ವ ವಹಿಸಿದ್ದ ಎಂಬ ಮಾನಸಿಕತೆ ಇದಕ್ಕೆ ಕಾರಣವಿರಬಹುದು ಎಂದು ತಿಳಿಸಿದರು.
ನಾವು ವೇಣುಗೋಪಾಲ್ ಕುಟುಂಬದ ಜೊತೆ ನಿಲ್ಲಲಿದ್ದೇವೆ. ಹತ್ಯೆ ಮಾಡಿದವರಿಗೆ ಶಿಕ್ಷೆ ಆಗಬೇಕೆಂದು ವೇಣುಗೋಪಾಲ್ ಕುಟುಂಬದವರು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು. ಹತ್ಯೆ ಹಿಂದಿರುವವರಿಗೆ ಬಲಾಢ್ಯರ ಜೊತೆ ಸಂಪರ್ಕ ಇದೆ ಮತ್ತು ಪ್ರಕರಣವನ್ನು ದುರ್ಬಲಗೊಳಿಸುವ ಅಪಾಯವನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಚಿಕ್ಕೋಡಿಯ ಜೈನ ಮುನಿಗಳ ಹತ್ಯೆ ವಿಚಾರದಲ್ಲೂ ಬಡ್ಡಿ ವ್ಯವಹಾರ ಎಂಬ ಸುದ್ದಿಯನ್ನು ಹರಿಯಬಿಟ್ಟು ವಿಷಯಾಂತರ ಮಾಡುವ ಯತ್ನ ನಡೆದಿದೆ. ಬೊಗಸೆಯಲ್ಲಿ ದಿನಕ್ಕೆ ಒಮ್ಮೆ ಊಟ ಮಾಡುವ ಸ್ವಾಮೀಜಿ ಬಡ್ಡಿ ವ್ಯವಹಾರ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಜೈನ ಸನ್ಯಾಸ ಎಂಬುದು ಅತ್ಯಂತ ಕಠಿಣಾತಿಕಠಿಣ ಎಂದು ವಿವರಿಸಿದರು. ಹಸನ್ ದಲಾಯತ್ ಹೆಸರನ್ನು ಒತ್ತಡ ಬಂದ ಬಳಿಕ ಎಫ್‍ಐಆರ್‍ನಲ್ಲಿ ಸೇರಿಸಿದ್ದಾರೆ. ಅದಕ್ಕೆ ಮೊದಲು ನಾರಾಯಣ ಮಾಳಿ ಹೆಸರನ್ನು ಮಾತ್ರ ಉಲ್ಲೇಖಿಸಿದ್ದರು ಎಂದು ಅವರು ತಿಳಿಸಿದರು.
ದನಗಳ್ಳ ಕಬೀರ್ ಪೊಲೀಸ್ ಎನ್‍ಕೌಂಟರ್‍ನಲ್ಲಿ ಸತ್ತಿದ್ದ. ಕಬೀರ್‍ಗೆ ಸರಕಾರ ಪರಿಹಾರ ಕೊಟ್ಟಿದೆ. ಎನ್‍ಕೌಂಟರ್ ಮಾಡಿದ ಪೊಲೀಸನನ್ನು ಸರಕಾರ ಜೈಲಿಗೆ ಹಾಕಿತ್ತು. ಈ ಮೂಲಕ ತಾನು ಕ್ರಿಮಿನಲ್ ಪರ ಎಂದು ಕಾಂಗ್ರೆಸ್ ಸರಕಾರ ಸಾಬೀತುಪಡಿಸಿತ್ತು ಎಂದು ಆರೋಪಿಸಿದರು. ಮಾನವೀಯತೆ ಸತ್ತ ಸ್ಥಿತಿಯಲ್ಲಿ ಈ ಸರಕಾರ ಇದೆ. ತುಷ್ಟೀಕರಣದ ಪರಮಾವಧಿಗೆ ತಲುಪಿದೆ ಎಂದು ಟೀಕಿಸಿದರು. ಸರಕಾರದ ಸಂದೇಶದಿಂದ ತಾಲಿಬಾನಿಗಳು ಮತ್ತೆ ಎದ್ದು ನಿಲ್ಲುವಂತಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಅಶ್ವತ್ಥನಾರಾಯಣ್, ಶಾಸಕರಾದ ಶ್ರೀವತ್ಸ, ಮಾಜಿ ಸಚಿವ ಎನ್ ಮಹೇಶ್, ಬಿಜೆಪಿ ನಾಯಕರಾದ ಶ್ರೀಮತಿ ಮಂಗಳಾ ಸೋಮಶೇಖರ್, ಮೈ.ವಿ.ರವಿಶಂಕರ್ ಸೇರಿದಂತೆ ಬಿಜೆಪಿ ಮುಖಂಡರು ನಿಯೋಗದಲ್ಲಿ ಇದ್ದರು. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ವೇಣುಗೋಪಾಲ್ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಸರ್ವ ಪ್ರಯತ್ನ ಮಾಡುವುದಾಗಿ ಸತ್ಯ ಶೋಧನಾ ಸಮಿತಿಯ ಪರವಾಗಿ ಭರವಸೆ ನೀಡಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


