ತುಮಕೂರು: ಸರಕಾರಿ ಶಾಲಾ,ಕಾಲೇಜುಗಳು ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿದ್ದು,ಇವುಗಳ ಪೂರೈಸುವ ನಿಟ್ಟಿನಲ್ಲಿ ಸರಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಒತ್ತಾಯಿಸಿದ್ದಾರೆ.
ತುಮಕೂರು ನಗರದ ಕನ್ನಡ ಭವನದಲ್ಲಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ(ರಿ)ಆಯೋಜಿಸಿದ್ದ ನಿವೃತ್ತ ಪ್ರಾಂಶುಪಾಲ ರಿಗೆ ಸನ್ಮಾನ,ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ,ಪ್ರಾಂಶುಪಾಲರ ಸಂಘದ ವಾರ್ಷಿಕ ಸಾಮಾನ್ಯ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು,ಸರಕಾರಿ ಕಾಲೇಜುಗಳಲ್ಲಿ,ಅದರಲ್ಲಿಯೂ ವಿಜ್ಞಾನ ಕಾಲೇಜುಗಳು,ಲೈಬ್ರರಿ, ಪ್ರಯೋಗಾಲಯಗಳ ಕೊರತೆ ಇಂದಿಗೂ ಕಾಡುತ್ತಿದೆ.ಗುಣಮಟ್ಟ ಶಿಕ್ಷಣ ಮಕ್ಕಳಿಗೆ,ಅದರಲ್ಲಿಯೂ ಗ್ರಾಮೀಣ ಮಕ್ಕಳಿಗೆ ದೊರೆಯಬೇಕಾದರೆ, ಮೂಲಭೂತ ಸೌಕರ್ಯಗಳ ಕೊರತೆ ನೀಗಬೇಕಿದೆ ಎಂದರು.
ಕಳೆದ 20 ವರ್ಷಗಳಿಂದ ವೈ.ಎ.ನಾರಾಯಣಸ್ವಾಮಿ ಅವರು ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಹಗಲಿರುಳು ಶ್ರಮಿಸುತಿದ್ದಾರೆ. ಅನುದಾನಿತ ಕಾಲೇಜುಗಳ ಖಾಲಿ ಹುದ್ದೆಗಳ ತುಂಬಲು ಸರಕಾರದ ಮೇಲೆ ಒತ್ತಡ ತಂದಿದ್ದಾರೆ. 2020ವರೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬುವಂತೆ ಅಧಿವೇಶನದಲ್ಲಿ ಚರ್ಚೆ ನಡೆಸಿದ್ದು, ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ನಮ್ಮಲ್ಲಿದೆ.ಗ್ರಾಮೀಣ ಭಾಗದಲ್ಲಿ ಕೆಲ ಅನುದಾನಿತ ಕಾಲೇಜುಗಳು ಏಕ ಶಿಕ್ಷಕ ಶಾಲೆಯಂತೆ ಗೋಚರಿಸುತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಎಂ.ಎಲ್.ಸಿ. ಚಿದಾನಂದ ಎಂ.ಗೌಡ ತಿಳಿಸಿದರು.
ಮುಂದಿನ ಒಂದು ವರ್ಷದಲ್ಲಿ ಆಗ್ನೆಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಲಿದೆ. ನಮ್ಮಲ್ಲರ ವೈ.ಎ.ಎನ್.ಮತ್ತೊಮ್ಮೆ ಆಯ್ಕೆ ಬಯಸಿದ್ದು, ನಿಮ್ಮೆಲ್ಲರ ಸಹಕಾರ ಬೇಕಿದೆ.ನಾನು ಜಿಲ್ಲೆಯ ಜವಾಬ್ದಾರಿ ಹೊತ್ತುಕೊಳ್ಳುವ ಭರವಸೆ ನೀಡಿದ್ದು, ಈ ನಿಟ್ಟಿನಲ್ಲಿ ನಮ್ಮ ನಿಮ್ಮ ಬಾಂಧವ್ಯ ಹೀಗೆಯ ಮುಂದುವರೆಯಲಿ ಎಂಬ ಆಶಯ ನಮ್ಮದಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ,ಪ್ರಾಂಶುಪಾಲರು ಒಂದು ರೀತಿಯಲ್ಲಿ ಹಡಗಿನ ಕ್ಯಾಪ್ಟನ್ ಇದ್ದಂತೆ, ಹಡಗಿನ ಇತರೆ ಸಿಬ್ಬಂದಿಯ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದರೆ, ಹಡಗಿನ ಪ್ರಯಾಣ ಸುಖಕರವಾಗಿರುತ್ತದೆ. ನಾನು ದೊಡ್ಡವ ಎಂಬ ಅಹಂ ಪ್ರಾಂಶುಪಾಲರಲ್ಲಿ ಬಂದರೆ ಸಮಸ್ಯೆಗಳು ಆರಂಭವಾಗುತ್ತವೆ. ಹಾಗಾಗಿ ಬಸವಣ್ಣನವರ ‘ಎನಗಿಂತ ಕಿರಿಯರಿಲ್ಲ’ ಎಂಬ ನಾಣ್ನುಡಿಯನ್ನು ಪಾಲಿಸಿದರೆ ಪ್ರಾಂಶುಪಾಲರ ಕಾರ್ಯ ಸುಗಮವಾಗಲಿದೆ ಎಂದು ಕಿವಿ ಮಾತು ಹೇಳಿದರು.
ಇಂದಿನ ಕಾರ್ಯಕ್ರಮ ಸಮಾಜ ಮೆಚ್ಚುವಂತಹದ್ದಾಗಿದೆ.ಸುಮಾರು 35—40 ವರ್ಷಗಳ ಕಾಲ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕೆಲಸ ಮಾಡಿದ ಹಿರಿಯರನ್ನು ಗೌರವಿಸುವುದರ ಜೊತೆಗೆ,ಕಲಾ,ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಜಿಲ್ಲೆಯ 11 ತಾಲೂಕುಗಳಿಂದ ಅತಿ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗೌರವಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕೆಲಸ.ಇಂತಹ ಕೆಲಸಗಳಿಗೆ ಸದಾ ನನ್ನ ಬೆಂಬಲವಿದೆ. ಕಳೆದ 15 ವರ್ಷಗಳ ಶಾಸಕ ಜೀವನದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಮಸ್ಯೆಗೆ ಬಗೆಹರಿಸಲು ನಿರಂತರ ಪ್ರಯತ್ನ ನಡೆಸಿದ್ದೇನೆ. ಮುಂದೆಯೂ ನಿಮ್ಮ ಪರವಾಗಿ ವಿಧಾನಪರಿಷತ್ತಿನ ಒಳಗೆ ಮತ್ತು ಹೊರಗೆ ದ್ವನಿ ಎತ್ತಲಿದ್ದೇನೆ ಎಂಬ ಆಶ್ವಾಸನೆಯನ್ನು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಚಂದ್ರಶೇಖರ ಆರಾಧ್ಯ.ಹೆಚ್.ವಿ., ಪದವಿಪೂರ್ವ ಕಾಲೇಜು ಪ್ರಾಂಶುಪಾಲರಲ್ಲಿದ್ದ ಅನುದಾನಿತ, ಸರಕಾರಿ, ಅನುದಾನ ರಹಿತ ಸಂಘಗಳನ್ನು ಒಗ್ಗೂಡಿಸಿ, ಒಂದು ಸೂರಿನ ಅಡಿ ತಂದು, ಸಮಸ್ಯೆಗಳನ್ನು ಚರ್ಚಿಸಿ, ಸರಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತಿದೆ.ಭೋಧನೆಯ ಜೊತೆಗೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಕಡೆಗೂ ಸಂಘ ಗಮನಹರಿಸಿದೆ.ಶಿಕ್ಷಕ ವೃತ್ತಿ ಎಂಬುದು ಪರಿವರ್ತನೆಯ ಹಾದಿ ಎಂದು ತಿಳಿದಿರುವ ಸಂಘ,ನಿವೃತ್ತ ಪ್ರಾಂಶಪಾಲರ ಸನ್ಮಾನದ ಜೊತೆಗೆ, ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸುವ ಕಾರ್ಯ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಸ್ತುತ ಸಾಲಿನಲ್ಲಿ ನಿವೃತ್ತರಾದ ಸುಮಾರು 80 ಜನ ಪ್ರಾಂಶುಪಾಲರಿಗೆ, 36 ಜನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಭಾಕರ್ ರೆಡ್ಡಿ.ಕೆ ವಹಿಸಿದ್ದರು. ಪದವಿಪೂರ್ವ ಇಲಾಖೆ ಡಿಡಿಪಿಐ ಗಂಗಾಧರ್, ಕಸಾಪ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ, ಸಿ.ಎ.ವಿಶ್ವಾನಾಥ್,ಶ್ರೀಮತಿ ಅಕ್ಕಮ್ಮ, ಡಾ.ಕೆ.ಮೋಹನ್ ಕುಮಾರ್,ಕೋಶಾಧ್ಯಕ್ಷ ಕೃಷ್ಣಮೂರ್ತಿ, ಪ್ರೊಫೆಸರ್ ಶ್ರೀನಿವಾಸ್ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಮುದ್ದಯ್ಯ, ರಾಜ್ಯ ಪ್ರತಿನಿಧಿ ಜೈರಾಮ್, ಉಪಾಧ್ಯಕ್ಷರಾದ ಶ್ರೀಮತಿ ತ್ರಿವೇಣಿ,ರಾಜಕುಮಾರ್,ರವಿಶಂಕ ರ್,ಗೋವಿಂದರಾಜು, ದೀಕ್ಷ ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್, ಸತ್ಯನಾರಾಯಣ್, ಜ್ಯೋತಿಪ್ರಕಾಶ್, ಭೂತರಾಜು, ಚಿಕ್ಕಪ್ಪಯ್ಯ, ಧರ್ಮೆಂದ್ರ ರವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA