ತುಮಕೂರು: ಜಿಲ್ಲಾ ವ್ಯಾಪ್ತಿಯ ಕೊರಟಗೆರೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದಲ್ಲಿನ ವಿದ್ಯಾರ್ಥಿನಿಯರಿಗೆ ಕನಿಷ್ಠ ರಕ್ಷಣೆ ಒದಗಿಸದೆ ಇರುವುದನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತುಮಕೂರು ಜಿಲ್ಲಾ ಘಟಕ ಖಂಡಿಸಿದೆ.
ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ಗೇಟ್ ಹಾರಿ ಕಾರೊಂದರಲ್ಲಿ ಹೋಗಿರುವ ಘಟನೆಗೆ ಸಂಬಂಧಿಸಿದಂತೆ ಆಟೋ ಚಾಲಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಾಡಿರುವುದು ಆ ಬಡ ಹೆಣ್ಣುಮಕ್ಕಳನ್ನು ನಿಮ್ಮ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿನಿ ನಿಲಯದಲ್ಲಿ ನಿಮ್ಮನ್ನು ಮತ್ತು ಇಲಾಖೆಯನ್ನು ನಂಬಿ ಬಿಟ್ಟಿರುವ ಪೋಷಕರಿಗೆ ಅಲ್ಪವಾದರೂ ಸಮಾಧಾನ ತಂದು ಕೊಟ್ಟಿದ್ದರೂ ಸಹ ನಿಮ್ಮ ಇಲಾಖೆಯ ಮೇಲೆ ನಂಬಿಕೆ ಕಡಿಮೆ ಆಗಿದೆ ಎಂದಿದೆ.
ವಿದ್ಯಾರ್ಥಿ ನಿಲಯದ ವಿದ್ಯಾರ್ಥಿನಿಯೋರ್ವಳು ರಾತ್ರಿ 11 ಗಂಟೆಗೆ ಕಾಂಪೌಂಡ್ ಗೋಡೆ ಹಾರಿ ಯಾವುದೋ ಕಾರಿನಲ್ಲಿ ಹೊರಗೆ ಹೋಗಿ ನಂತರ ಬೆಳಗಿನ ಜಾವ 5 ಗಂಟೆಗೆ ಅದೇ ಕಾಂಪೌಂಡ್ ಹಾರಿ ಬಂದಿರುವುದು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ವಿಪರ್ಯಾಸವೆಂದರೆ ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋದಲ್ಲಿರುವಂತೆ ಕಾರಿನಲ್ಲಿ ಸದರಿ ವಿದ್ಯಾರ್ಥಿ ನಿಲಯದಲ್ಲಿನ ವಿದ್ಯಾರ್ಥಿನಿ ಹೋಗುತ್ತಿರುವುದು ಸ್ಪಷ್ಟವಾಗಿ ತಿಳಿದರೂ ಸಹ ಪೊಲೀಸ್ ದೂರಿನಲ್ಲಿ ಆಟೋ ಚಾಲಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುತ್ತದೆ. ಆದರೆ ಸದರಿ ವಿದ್ಯಾರ್ಥಿನಿಯನ್ನು ಕರೆದೊಯ್ದ ಕಾರಿನ ಮಾಲೀಕ ಮತ್ತು ಚಾಲಕನ ವಿರುದ್ಧ ದೂರು ದಾಖಲಿಸದ ಮರ್ಮವೇನು ? ಎಂಬುದು ಇನ್ನು ಯಕ್ಷ ಪ್ರಶ್ನೆಯಾಗಿಯೇ ಉಳಿದಿದ್ದು ಇಲಾಖೆ ಯಾರನ್ನೋ ರಕ್ಷಿಸುವ ಕೆಲಸ ಮಾಡುತ್ತಿರುವಂತೆ ಗೋಚರವಾಗುತ್ತಿದೆ, ಒಂದು ವೇಳೆ ನಿಲಯಪಾಲಕರೇ ಈ ಕೃತ್ಯದಲ್ಲಿ ಏತಕ್ಕೆ ಭಾಗಿಯಾಗಿರಬಾರದು ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಇದು ನಿಮ್ಮ ಇಲಾಖೆಗೆ ಒಂದು ಕಪ್ಪು ಚುಕ್ಕೆಯಾಗಿರುತ್ತದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಶಂಕೆ ವ್ಯಕ್ತಪಡಿಸಿದೆ.
ಸದರಿ ಪ್ರಕರಣದಲ್ಲಿ ತಾವುಗಳೇ ಸದರಿ ನಿಲಯದ ಪಾಲಕರ ಮೇಲೆ ಏಕೆ ಇದುವರೆವಿಗೂ ಇಲಾಖಾ ಶಿಸ್ತುಕ್ರಮ ತೆಗೆದುಕೊಂಡಿಲ್ಲ? ಕೇವಲ ಕಣ್ಣೊರೆಸುವ ಸಲುವಾಗಿ ನೋಟೀಸ್ ನೀಡಿರುವುದನ್ನು ಗಮನಿಸಿದರೆ ಸದರಿ ಕೃತ್ಯಕ್ಕೆ ಸಹಕರಿಸಿರುವ ಆರೋಪಿತರನ್ನು ರಕ್ಷಿಸಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ತಾವುಗಳು ಕೂಡಲೇ ಸದರಿ ನಿಲಯ ಪಾಲಕರನ್ನು ಸೇರಿದಂತೆ ಅಲ್ಲಿನ ಕಾವಲುಗಾರರ ವಿರುದ್ಧ ಈಗಾಗಲೇ ದಾಖಲಾಗಿರುವ ದೂರಿನಲ್ಲಿ ಅವರನ್ನು ಆರೋಪಿತರನ್ನಾಗಿ ಮಾಡಿ ಆ ಕಾರಿನ ಚಾಲಕ ಮತ್ತು ಆ ಕಾರು ಯಾರದು ಎಂಬುದರ ಬಗ್ಗೆಯೂ ತನಿಖೆ ಮಾಡುವಂತೆ ಇಲಾಖೆ ವತಿಯಿಂದ ಪೊಲೀಸರಿಗೆ ದೂರು ಕೊಟ್ಟು ಮುಂದೆ ಇಂತಹ ಕೃತ್ಯಗಳು ತಮ್ಮ ಇಲಾಖಾ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡು ಅಮಾಯಕ ಹೆಣ್ಣು ಮಕ್ಕಳನ್ನು ರಕ್ಷಿಸುವ ಹೊಣೆಗಾರಿಕೆ ಹೊರಬೇಕಾಗಿದೆ ಎಂದು ಒತ್ತಾಯಿಸಿದೆ.
ಒಂದು ವೇಳೆ ತಾವುಗಳು ಈ ಮನವಿ ಪತ್ರ ತಲುಪಿದ 15 ದಿನದೊಳಗೆ ಸದರಿ ನಿಲಯಪಾಲಕರು ಮತ್ತು ಅಲ್ಲಿನ ಕಾವಲು ಸಿಬ್ಬಂದಿಯನ್ನು ಅಮಾನತಿನಲ್ಲಿಟ್ಟು ಅವರ ವಿರುದ್ಧ ಪೊಲೀಸ್ ದೂರನ್ನು ದಾಖಲಿಸಲು ಪೊಲೀಸರಿಗೆ ದೂರನ್ನು ಕೊಡದೆ ಇದ್ದ ಪಕ್ಷದಲ್ಲಿ ನಿಮ್ಮ ವಿರುದ್ಧವೂ ಸೇರಿದಂತೆ ಸಂಬಂಧ ಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡುವುದರ ಮೂಲಕ ಈ ನೊಂದ ಅಮಾಯಕ ಹೆಣ್ಣು ಮಕ್ಕಳಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡಲಾಗುವುದೆಂದು ತಮ್ಮ ಗಮನಕ್ಕೆ ತರಬಯಸುತ್ತಿದ್ದೇವೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಎಚ್ಚರಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA