ತುಮಕೂರು: ನಗರದ ಸ್ಟೇಶನ್ ರಸ್ತೆಯ “ಸಮೃದ್ಧಿ ಗ್ರ್ಯಾಂಡ್” ಹೊಟೇಲ್ ನಲ್ಲಿ ಜಿ.ಎಲ್.ನಟರಾಜು ಅವರ ಸಾರಥ್ಯದ “ನಮ್ಮ ತುಮಕೂರು” ಡಿಜಿಟಲ್ ಮಾಧ್ಯಮವು ಸೋಮವಾರ(01-11-2021) ಲೋಕಾರ್ಪಣೆಯಾಯಿತು
ಕನ್ನಡ ರಾಜ್ಯೋತ್ಸವ ಶುಭ ದಿನದಂದು ಸಂಜೆ ನಡೆದ ಲೋಕಾರ್ಪಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಶ್ವವಿದ್ಯಾನಿಲಯ ಕಲಾ ಕಾಲೇಜು ತುಮಕೂರಿನ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಕರಿಯಣ್ಣ ಮಾತನಾಡಿ, ಮಾಧ್ಯಮಗಳು ಯಾವುದೇ ಮುಲಾಜಿಗೆ ಒಳಗಾಗಿ ಪರರ ಆಧೀನವಾಗಬಾರದು ಮತ್ತು ಗ್ರಾಮೀಣ ಪ್ರದೇಶದ ಶೋಷಿತರು, ನೊಂದವರ ಧ್ವನಿಯಾಗಬೇಕು. ನಟರಾಜುರವರ “ನಮ್ಮ ತುಮಕೂರು” ಮಾಧ್ಯಮ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿ ಎಂದು ಶುಭಕೋರಿದರು.
ಇನ್ನೋರ್ವ ಮುಖ್ಯ ಅತಿಥಿ ಸಾಹಿತಿ ಎನ್.ನಾಗಪ್ಪನವರು ಮಾತನಾಡಿ, ಹಸಿರು ಬೆಳೆದು ಅನ್ನ ನೀಡುವ ರೈತರ ಉಸಿರು ಉಳಿಸಲು, ರೈತರ ಅಭಿವೃದ್ಧಿಗೆ ಮಾಧ್ಯಮ ಬೆಳಕು ಚೆಲ್ಲಲಿ. ಈ ನಿಟ್ಟಿನಲ್ಲಿ “ನಮ್ಮ ತುಮಕೂರು” ಮಾಧ್ಯಮದ ಮೂಲಕ ನಟರಾಜು ಕೆಲಸ ಮಾಡುವಂತಾಗಲಿ ಎಂದು ಹಾರೈಸಿದರು.
ನಗರದ ಸರ್ಕಾರಿ ಚಿತ್ರಕಲಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಸಿ.ಬಾರಕೇರಿ ಅವರು ಮಾತನಾಡಿ, ನಟರಾಜು ಅವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅನುಭವಿಸಿದ ಬಡತನ, ಹಸಿವು, ನೋವು-ಸಂಕಟಗಳಿಂದ ಪಾಠ ಕಲಿತಿದ್ದು, ತನ್ನಂತೆಯೇ ಇತರರ ಕಷ್ಟ ಅನುಭವಿಸದಂತೆ ಸಾವಿರಾರು ಬಡ ಮಕ್ಕಳಿಗೆ ಉದ್ಯೋಗ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು “ನಮ್ಮ ತುಮಕೂರು” ಮಾಧ್ಯಮದ ಮೂಲಕ ಮತ್ತಷ್ಟು ಶಕ್ತಿ ಸಂಪಾದಿಸಲು ಮುಂದಾಗಿದ್ದಾರೆ. ಅವರ ಸೇವೆಯಿಂದ ಅನೇಕ ಕುಟುಂಬಗಳಿಗೆ ನೆರವಾಗುವ ಮೂಲಕ ತಮ್ಮ ಸೇವಾ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದಾರೆ. ಅವರ ಉತ್ತರೋತ್ತರ ಬೆಳವಣಿಗೆಗೆ ದೇವರು ಅವರನ್ನು ಆಶೀರ್ವಾದಿಸಲಿ ಎಂದು ಶುಭಕೋರಿದರು.
ಇನ್ನೂ ಕ.ರ.ವೇ. ಕನ್ನಡ ಸೇನೆಯ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ ಕರೋನಾ ಸಂಕಷ್ಟದಲ್ಲಿ ಕೆಲವರು ತಮ್ಮ ಅಮಾನವೀಯ ವರ್ತನೆಗಳಿಂದ ಬಡ ಮಧ್ಯಮ ವರ್ಗದವರ ಶೋಷಣೆ ಮಾಡುವುದನ್ನು ಮುಂದುವರಿಸಿದ್ದಾರೆ. ಇದು ಸ್ವಸ್ತ ಸಮಾಜಕ್ಕೆ ಮಾರಕವಾದ ಕಾರ್ಯ ಎಂದರು.
ಇನ್ನೋರ್ವ ಸಾಮಾಜಿಕ ಹೋರಾಟಗಾರರಾದ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷರಾದ ಪಿ.ಎನ್.ರಾಮಯ್ಯ ಅವರು ಮಾತನಾಡಿ, ಜನನಾಯಕರು ಜನಸಾಮಾನ್ಯರ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಶ್ರಮಿಸಬೇಕು. ಆಗ ಮಾತ್ರ ಅವರು ಉತ್ತಮ ಜನನಾಯಕರಾಗುತ್ತಾರೆ. ಇದಕ್ಕಾಗಿ ಜನರು ಹೋರಾಟದ ಮಾರ್ಗ ಅನುಸರಿಸುವಂತಾಗ ಬೇಕು ಎಂದರು.
ಗೋಲನ ಎಂಟರ್ ಪ್ರೈಸಸ್ ಹಾಗೂ ನಮ್ಮ ತುಮಕೂರು ಮಾಧ್ಯಮ ಸಂಸ್ಥಾಪಕರಾದ ಜಿ.ಎಲ್.ನಟರಾಜು ಅವರ ಕಿರಿಯ ಪುತ್ರ ಧನುಷ್ ಜಿ.ಎನ್. ಅವರು ಮಾಧ್ಯಮದ ಬಟನ್ ಒತ್ತಿ ನಮ್ಮ ತುಮಕೂರು ಮಾಧ್ಯಮವನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ನಾಡ ದೇವಿ ಭುವನೇಶ್ವರಿ ದೇವಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚಣೆ ಮಾಡಲಾಯಿತು. ಮತ್ತು ನಾಡಗೀತೆಯೊಂದಿಗೆ ರಾಜ್ಯೋತ್ಸವವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಚಲನ ಚಿತ್ರದ ದ್ರುವತಾರೆ ಅಪ್ಪು ಅವರ ನಿಧನಕ್ಕೆ ಮೌನಾಚರಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ್ದ ಎಲ್ಲ ಅತಿಥಿಗಳು ಗಣ್ಯರನ್ನು ಸನ್ಮಾನಿಸಲಾಯಿತು.
ಯುವ ಪ್ರತಿಭೆ ಕುಮಾರಿ ಸಾರಿಕಾ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕ ಯತೀಶ್ ಕುಮಾರ್ ಅವರು ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ನಟರಾಜು ಅವರ ಬಂಧು ಮಿತ್ರರು, ಮಾಧ್ಯಮ ಮಿತ್ರರು, ಗುರು ಬಳಗದವರು ಭಾಗವಹಿಸಿದ್ದರು.
ಅಲಂಕಾರ ಮತ್ತು ತಾಂತ್ರಿಕ ಸಹಾಯವನ್ನು ಮಿತ್ರ ಮಹಮದ್ ಗೌಸ್ ಪೀರ್ ರವರು ನೀಡಿದರು ಮತ್ತು ಇದೆ ಸಂದರ್ಭದಲ್ಲಿ ಕರವೇ ಕನ್ನಡ ಸೇನೆಯ ರಾಜ್ಯಾಧ್ಯಕ್ಷರಾದ ಅರುಣ್ ಕುಮಾರ್ ರವರು “ನಮ್ಮ ತುಮಕೂರು” ಡಿಜಿಟಲ್ ಸುದ್ದಿ ಮಾಧ್ಯಮದ ಸಂಪಾದಕರಾದ ನಟರಾಜು ಜಿ.ಎಲ್.ರವರಿಗೆ ಕರವೇ ಕನ್ನಡ ಸೇನೆ ವತಿಯಿಂದ ಸನ್ಮಾನಿಸಿದರು.