ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳನ್ನು ಗುರುತಿಸುವಲ್ಲಿ ಪೊಲೀಸರ ಪಾತ್ರ ಮುಖ್ಯ. ಆ ಮಕ್ಕಳ ಸಾಮರ್ಥ್ಯ ಅನುಸಾರ ವಾತಾವರಣ ಕಲ್ಪಿಸಿ ಉತ್ತಮ ಪ್ರಜೆಗಳಾಗಿ ರೂಪಿಸಬೇಕು’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹೇಳಿದರು.
ಬಾಲ ನ್ಯಾಯ ಮಂಡಳಿ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಭಾನುವಾರ ಆಯೋಜಿಸಿದ್ದ ‘ಮಕ್ಕಳ ರಕ್ಷಣೆಯ ಕುರಿತು ಸಮಾಲೋಚನ ಸಭೆ’ಯಲ್ಲಿ ವರ್ಚ್ಯುವಲ್ ಆಗಿ ಅವರು ಮಾತನಾಡಿದರು.
‘ರಾಜ್ಯದಲ್ಲಿ 34 ಬಾಲ ನ್ಯಾಯಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. 17 ಪುನಶ್ವೇತನ ಕೇಂದ್ರಗಳಲ್ಲಿ ಕಾನೂನಿನ ಜೊತೆ ಸಂಘರ್ಷಕ್ಕಿಡಾದವರ ಪುನಶ್ವೇತನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸಂಘರ್ಷಕ್ಕಿಡಾದ 6,366 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ’ ಎಂದು ಮಾಹಿತಿ ನೀಡಿದರು.
‘ಮಕ್ಕಳು ಕಾನೂನುಬಾಹಿರ ಚಟುವಟಿಕೆಗಳಿಗೆ ಸಿಲುಕದಂತೆ ಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಕುಟುಂಬ, ಶಿಕ್ಷಣ ಸಂಸ್ಥೆಗಳು, ಕಾನೂನು ಅನುಷ್ಠಾನ ಸಂಸ್ಥೆಗಳು ಒಟ್ಟಾಗಿ ಕಾರ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.
‘ಮಕ್ಕಳನ್ನು ಬಂಧನದಲ್ಲಿರಿಸಿದರೆ ಮತ್ತಷ್ಟು ತಪ್ಪು ದಾರಿಗೆ ಹೋಗುವ ಸಾಧ್ಯತೆ ಇದೆ. ಅವರನ್ನು ಸಮುದಾಯ ಆಧಾರಿತ ಪರ್ಯಾಯ ಮಾರ್ಗಗಳ ಮೂಲಕ ಅವರಲ್ಲಿ ಧನಾತ್ಮಕತೆ ತರಬೇಕು. ಮಕ್ಕಳ ಸ್ನೇಹಿ ನ್ಯಾಯದಾನಕ್ಕೆ ಪ್ರಯತ್ನ ನಡೆಸೋಣ’ ಎಂದರು.
ನ್ಯಾಯಮೂರ್ತಿಗಳಾದ ಜಿ. ನರೇಂದರ್, ದಿನೇಶ್ ಕುಮಾರ್, ಕೆ. ಸೋಮಶೇಖರ್, ಕೆ. ಎಸ್. ಮುದ್ದಲ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಇದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


