ಬಾಗಲಕೋಟೆ: ಭಾರತವು ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಲಿಷ್ಠವಾಗಿದ್ದು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಸಾಧನೆಯಿಂದ ವಿಶ್ವಕ್ಕೆ ಮಾದರಿಯಾಗಿದೆ. ಭ್ರಷ್ಟಾಚಾರ, ಭಯೋತ್ಪಾದನಾ, ಕೋಮುವಾದ, ಜಾತ್ಯತೀತ ರಾಷ್ಟ್ರಕ್ಕಾಗಿ ಯುವಶಕ್ತಿಯು ಈ ದಿನ ಸಂಕಲ್ಪ ತೊಡಬೇಕಾಗಿದೆ ಎಂದು ಪ್ರಾಚಾರ್ಯರಾದ ಎಸ್. ಆರ್ ಮುಗನೂರಮಠ ಹೇಳಿದರು.
ಬಿವಿವಿ ಸಂಘದ ಬಸವೇಶ್ವರ ಕಲಾ ಮಾಹಾವಿದ್ಯಾಲಯದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಮಾಡಿ ಮಾತನಾಡಿದರು. ಸ್ವಾತಂತ್ರ್ಯ ಸ್ಥಾಪನೆಗಾಗಿ ರಕ್ತ ತರ್ಪಣಗೈದ ವೀರಯೋಧರಿಗೆ ಗೌರವ ಸಲ್ಲಿಸುತ್ತ ಇಂದು ಕ್ವಿಟ್ ಇಂಡಿಯಾದ 79ನೇ ವರ್ಷಾಚರಣೆಯ ಸಂದರ್ಭದಲ್ಲಿದ್ದೆವೆ. ಭಾರತ ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗುವುದಲ್ಲದೆ, ಸ್ವಯಂಪೂರ್ಣ ಸ್ವಾವಲಂಭಿಯಾಗಿ ಆತ್ಮಗೌರವದಿಂದ ಪ್ರತಿಯೊಬ್ಬ ಪ್ರಜೆಯೂ ಬದುಕು ಕಟ್ಟಿಕೊಳ್ಳುವ ಸುಭದ್ರ ದೇಶವಾಗಿ ನಿರ್ಮಾಣವಾಗಿದೆ. ರಾಷ್ಟ್ರಾಭಿವೃದ್ಧಿಗೆ ಪೂರಕವಾದ ಅನೇಕ ಯೋಜನೆಗಳು, ಕ್ರಾಂತಿಗಳು ಪ್ರಗತಿಯ ಮೈಲುಗಲ್ಲುಗಳಾಗಿದ್ದು ನ್ಯೂಕ್ಲಿಯರ ಟೆಕ್ನಾಲಾಜಿ, ಸ್ಪೇಸ್ ಟೆಕ್ನಾಲಾಜಿಯಂತಹ ಅನೇಕ ಕ್ಷೇತ್ರಗಳಲ್ಲಿ ಭಾರತವು ತನ್ನ ಭೀಮ ಹೆಜ್ಜೆಗಳನ್ನಿರಿಸಿದೆ ಎಂದರು.
ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ, ‘ಮನದ ಮಾತು’ ಕಾರ್ಯಕ್ರಮ ಹಾಗೂ ಸ್ವಚ್ಛಭಾರತ ಅಭಿಯಾನ, ಸುವರ್ಣ ಗ್ರಾಮ ಯೋಜನೆ, ಇದೀಗ ತಾನೇ ಅನುಷ್ಟಾನಗೊಳ್ಳುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಯೋಜನೆಗಳು ಹೊಸ ಮನ್ವಂತರಕ್ಕೆ ನಾಂದಿಯಾಗುತ್ತಿವೆ. ಆದರೆ ಮತ್ತೊಂದೆಡೆ ನಗರೀಕರಣದ ಸೋಗಿನಲ್ಲಿ ಪ್ರಕೃತಿ ನಾಶ, ಮಾರಕ ರೋಗಗಳು, ನೆರೆಹಾವಳಿ, ಕೋಮುವಾದ, ಭಯೋತ್ಪಾದನೆ, ಮಹಿಳೆಯರ ಮೇಲಾಗುವ ಅತ್ಯಾಚಾರ ರೈತರ ಆತ್ಮಹತ್ಯೆಯಂತಹ ದುರ್ಘಟನೆಗಳು ರಾಷ್ಟ್ರವನ್ನು ದುರ್ಬಲಗೊಳಿಸುತ್ತಿದ್ದು ಅವುಗಳ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದರು.
ಸರ್ವಾಂಗೀಣ ಅಭಿವೃದ್ಧಿಯ ರಾಷ್ಟ್ರ ನಿರ್ಮಾಣದ ಕನಸು ನನಸಾಗಲು, ಪ್ರಧಾನಿಗಳ ಆಶಯದಂತೆ ನಾವೆಲ್ಲ ಸಂಕಲ್ಪ ಸ್ವಚ್ಛ ಭಾರತ ಸಂಕಲ್ಪ, ವ್ಯಸನಮುಕ್ತ. ಬಡತನ ಮುಕ್ತ ಕೋಮುವಾದ ಮುಕ್ತ ಸಂಕಲ್ಪದೊಂದಿಗೆ ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.
ಎನ್.ಸಿ.ಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಚಾರ್ಯರುಗಳಾದ ಬಿ.ಆರ್ ಪಾಟೀಲ್, ಎನ್.ಆರ್ ಹಳ್ಳೂರ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು ರಾಠೋಡ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ವಿ.ಎಸ್ ಚಿಗರಿ ಸೇರಿದಂತೆ ಎಲ್ಲ ಪ್ರಾದ್ಯಾಪಕರು ಎನ್.ಸಿಸಿ ಮತ್ತು ಎನ್‌ಎಸ್‌ಎಸ್ ಸ್ವಯಂ ಸೇವಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


