ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾವಿರಾರು ಜನರ ತ್ಯಾಗ, ಬಲಿದಾನಗಳ ಫಲವಾಗಿ ಇಂದು ನಾವು ಸ್ವಾತಂತ್ರ್ಯದ ಸವಿಯುಣ್ಣುತ್ತಿದ್ದೇವೆ. ಪ್ರಾಣದ ಹಂಗು ತೊರೆದು ದಾಸ್ಯದ ಸಂಕೋಲೆಯಿಂದ ದೇಶವನ್ನು ಬಿಡುಗಡೆಗೊಳಿಸಲು ಹೋರಾಡಿದ ಎಲ್ಲ ಮಹಾನ್ ಚೇತನಗಳಿಗೂ ಗೌರವ ಪೂರ್ವಕ ನಮನ ಸಲ್ಲಿಸುತ್ತೇನೆ ಎಂದು ಹೇಳಿದರು.
ಸ್ವತಂತ್ರ ಭಾರತದಲ್ಲಿ ಜೀವಿಸುತ್ತಿರುವ ನಮಗೆ ಸ್ವಾತಂತ್ರ್ಯ ಎಂಬುದು ಎಷ್ಟು ದುಬಾರಿಯಾದ ಸಂಗತಿ ಎಂಬುದು ಅರಿವಿಗೆ ಬರಲೇಬೇಕು. ಇಲ್ಲದಿದ್ದರೆ ನಮ್ಮ ಹಿರಿಯರ ತ್ಯಾಗ ಬಲಿದಾನಗಳಿಗೆ ಅರ್ಥವೇ ಇರುವುದಿಲ್ಲ. ಸ್ವಾತಂತ್ರ್ಯ ಎಂಬುದು ಮನುಷ್ಯರ ಜೀವಕ್ಕಿಂತ ಮಿಗಿಲು ಎಂದು ಸ್ವಾತಂತ್ರ್ಯ ಹೋರಾಟಗಾರರು ಭಾವಿಸಿದ್ದರು. ಆದ್ದರಿಂದಲೇ ಎಲ್ಲ ಮಹನೀಯರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರ ತ್ಯಾಗ ಬಲಿದಾನಗಳನ್ನು ದೇಶವು ಶ್ರದ್ಧಾಪೂರ್ವಕವಾಗಿ ಸ್ಮರಿಸಲೇಬೇಕು.
ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ನಮ್ಮ ಜನರಿಗೆ ಅರ್ಥವಾಗಿರುವುದರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ.
ವಸಾಹತುವಾದ ಮತ್ತು ಸಾಮ್ರಾಜ್ಯವಾದಗಳು ಜೀವಂತವಾಗಿದ್ದಾಗ, ಸ್ವಾತಂತ್ರ್ಯ ಗಳಿಸಿದರೆ ಸಾಕು ಅಭಿವೃದ್ಧಿ ಎಂಬುದು ತನ್ನಿಂದ ತಾನೆ ಸಾಧ್ಯವಾಗುತ್ತದೆ ಎಂದು ಭಾವಿಸಿ ನಮ್ಮ ಹಿರಿಯರು ಹೋರಾಟ ಮಾಡಿದ್ದರು. ಇದು ಸತ್ಯ ಕೂಡ ಆಗಿತ್ತು. ಸ್ವಾತಂತ್ರ್ಯವೇನೊ ಲಭಿಸಿತು.
ಆದರೆ, ನವ ಉದಾರವಾದಿ ನೀತಿಗಳು ಜಗತ್ತಿನಾದ್ಯಂತ ಪ್ರಾರಂಭವಾದ ಮೇಲೆ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಾ ಹೋಯಿತು. ಇಂದು ನಮ್ಮಲಿಯೇ ಶೇ.10 ರಷ್ಟು ಜನ ಶೇ.78 ಕ್ಕಿಂತ ಹೆಚ್ಚಿನ ಪ್ರಮಾಣದ ಸಂಪತ್ತಿನ ಮೇಲೆ ಯಜಮಾನಿಕೆ ಹೊಂದಿದ್ದಾರೆ. ಬ್ರಿಟಿಷ್ ಭಾರತದಲ್ಲಿ ನಮ್ಮ ದೇಶದ ಸಂಪತ್ತನ್ನು ಬ್ರಿಟಿಷರು ಹೊತ್ತೊಯ್ದರು. ಆದರೆ, ಇಂದು ನಮ್ಮಲ್ಲಿ ಕೆಲವೇ ದೊಡ್ಡ ಬಂಡವಾಳಿಗರ ಬಳಿ ಶೇಖರಣೆಗೊಳ್ಳುತ್ತಿದೆ. ಈ ರೀತಿಯಾದರೆ ಅಭಿವೃದ್ಧಿ ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೆಲ್ಲ ಮನಗಂಡೆ ನಾವು ಸಂಪತ್ತಿನ ಸಂಗ್ರಹ ಮತ್ತು ಹಂಚಿಕೆ ಹಾಗೂ ಮರುಹಂಚಿಕೆಗಳಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದೇವೆ. ಅದಕ್ಕಾಗಿಯೆ ನಾವು ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ ಎಂಬ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅರ್ಥಶಾಸ್ತ್ರಜ್ಞ ಅಮತ್ರ್ಯಸೇನ್ ಅವರ ಪ್ರಮೇಯವಾದ ಅಭಿವೃದ್ಧಿಯೆ ಸ್ವಾತಂತ್ರ್ಯ ಎಂಬುದರಲ್ಲಿ ನಂಬಿಕೆಯಿಟ್ಟು ಈ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆಂದು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


