ಬೆಂಗಳೂರು: ಬಿಜೆಪಿಯಿಂದ ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ಶಾಸಕರು ಬರೋದಾದರೆ ಅವರನ್ನು ಸ್ವಾಗತ ಮಾಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಬಿಜೆಪಿ ಶಾಸಕರಿಗೆ ಆಹ್ವಾನ ನೀಡಿದ್ದಾರೆ.
ಲೋಕಸಭೆ ಚುನಾವಣೆ ವೇಳೆಗೆ ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಬಹುದು. ಬಿಜೆಪಿಯಲ್ಲಿ ಬೇಸರ ಆಗಿ, ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಹೇಳಿ ಶಾಸಕರು ಬರಬಹುದು. ಬಿಜೆಪಿಯಿಂದ ಬರೋ ಶಾಸಕರನ್ನು ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಈಗಾಗಲೇ ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಹೇಳಿದ್ದಾರೆ. ಪರಿಶೀಲನೆ ಮಾಡಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಐಡಿಯಾಲಜಿ ನಂಬಿ, ಕಾಂಗ್ರೆಸ್ ಲೀಡರ್ ಶಿಪ್ ಮೇಲೆ ನಂಬಿಕೆ ಇಟ್ಟು ಪಕ್ಷಕ್ಕೆ ಬಂದರೆ ಬರಬಹುದು. ಹಿಂದೆ ಪಕ್ಷ ಬಿಟ್ಟು ಹೋದವರು ಕೂಡಾ ಬರಬಹುದು ಎಂದು ಸ್ಪಷ್ಟಪಡಿಸಿದರು.
ಪಕ್ಷ ಬಿಟ್ಟು ಹೋಗೋರು ವಾಪಸ್ ಬಂದಿರೋ ಉದಾಹರಣೆ ಇದೆ. ಆದರೆ ಅವರಿಗೆ ಫಸ್ಟ್ ಬೆಂಚ್ ಸಿಗಲ್ಲ. ತಪ್ಪು ಮಾಡಿದ್ದನ್ನು ಸರಿ ಮಾಡಿಕೊಳ್ತೀವಿ ಎಂದರೆ ಮಾಡಿಕೊಂಡು ಬರಬಹುದು. ಫಸ್ಟ್ ಬೆಂಚ್ ಸಿಗದೇ ಹೋದರೂ ಅವರಿಗೆ ಕ್ಲಾಸ್ ರೂಂಗೆ ಅವಕಾಶ ಇದೆ. ಅವರು ಮತ್ತೆ ಫಸ್ಟ್ ಬೆಂಚ್ ಸಿಗಬೇಕಾದರೆ ತುಂಬಾ ದಿನ ಆಗುತ್ತದೆ ಅಷ್ಟೇ ಎಂದರು.
ನನ್ನ ಜೊತೆ ಶಾಸಕರು ಚರ್ಚೆ ಮಾಡಿರೋ ಬಗ್ಗೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಈ ಬಾರಿ ಕರ್ನಾಟಕದ ಜನತೆ ನಮಗೆ ಅಧಿಕಾರ ಕೊಟ್ಟಿದೆ. ಅವರ ವಿಶ್ವಾಸಕ್ಕೆ ತಕ್ಕಂತೆ ಭರವಸೆ ಈಡೇರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು. ಇದಕ್ಕೆ ಏನು ಬೇಕೋ ಅದನ್ನು ಮಾಡುತ್ತೇವೆ ಎಂದರು.
ಜನರಿಗೆ ಭರವಸೆ ಈಡೇರಿಸೋದು ಒಂದು ಕಡೆಯಾದರೆ ರಾಜಕೀಯ ಮಾಡೋದು ಮತ್ತೊಂದು ಕಡೆ. ಬಿಜೆಪಿ ಅವರು ಕಳೆದ ಬಾರಿ 25 ಸ್ಥಾನ ಪಡೆದಿದ್ದರು. ಈ ಬಾರಿ ನಾವು ಇಷ್ಟು ಸ್ಥಾನ ಪಡೆಯಬೇಕು ಅಂತ ಇದ್ದೇವೆ. ಆದರೆ ಜನ ತೀರ್ಮಾನ ಮಾಡುತ್ತಾರೆ. ಜನರ ಬಳಿ ಹೋಗುತ್ತೇವೆ, ಜನ ತೀರ್ಮಾನ ಮಾಡ್ತಾರೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


