ತುಮಕೂರು: ಸಾಹಿತಿಗಳು ಶ್ರೇಷ್ಠತೆಯ ವ್ಯಸನದಿಂದ ಹೊರಬರ ಬಂದು ಜನಸಾಮಾನ್ಯರಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಕೆಲಸ ಮಾಡಬೇಕು ಎಂದು ಸಾಹಿತಿ ಡಾ.ಕೆ.ಆರ್.ಸಂಧ್ಯಾ ರೆಡ್ಡಿ ಸಲಹೆ ನೀಡಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೇಖಕಿ ಬಿ.ಸಿ.ಶೈಲಾ ನಾಗರಾಜ್ ಅವರಿಗೆ ಇಂದಿರಾರತ್ನ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.
ಯುವಜನರು, ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ ಎಂದರು. ದೊಡ್ಡದೊಡ್ಡ ಸಾಹಿತಿಗಳು, ವಿಮರ್ಶಕರಿಗೆ ಜನಸಾಮಾನ್ಯರು ಲೆಕ್ಕಕ್ಕೇ ಇಲ್ಲ. ಸಾಮಾನ್ಯರ ಅಭಿರುಚಿ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಶ್ರೇಷ್ಠತೆಯ ವ್ಯಸನದಿಂದ ನರಳುತ್ತಿದ್ದು, ಮಹಿಳಾ ಸಾಹಿತ್ಯವನ್ನು ಅವಗಣನೆಯಿಂದ ನೋಡುತ್ತಿದ್ದಾರೆ ಎಂದು ಸಂಧ್ಯಾ ರೆಡ್ಡಿ ವಿಷಾದ ವ್ಯಕ್ತಪಡಿಸಿದರು.
ಕನಕ, ಬಸವ, ಅಂಬೇಡ್ಕರ್, ವಾಲ್ಮೀಕಿ ಜಯಂತಿಗಳನ್ನು ಸರ್ಕಾರಗಳು ಮಾಡುತ್ತವೆ. ಆಯಾ ಜಾತಿಯ ಮುಖಂಡರು, ಶಾಸಕರನ್ನು ಕರೆಸಿ ಪ್ರಶಸ್ತಿ ಕೊಡಿಸಿ ಕಾರ್ಯಕ್ರಮ ಮುಗಿಸುವುದರಿಂದ ಯಾರಿಗೂ ಮಹನೀಯರ ಕುರಿತು ಮಾಹಿತಿ ತಿಳಿಯುವುದಿಲ್ಲ. ಕಣ್ಣಿಗೆ ಪಟ್ಟಿ ಕಟ್ಟಿಕೊಂಡಂತೆ ಕಾರ್ಯಕ್ರಮ ನಡೆಸುತ್ತಾರೆ. ಅವರನ್ನು ಜಾತಿಗೆ ಸೀಮಿತಗೊಳಿಸಿ ಅರ್ಥಹೀನವಾಗಿ ಜಯಂತಿ ಆಚರಿಸುತ್ತಿದ್ದು, ಇದು ತಪ್ಪಬೇಕು ಎಂದು ಅವರು ಒತ್ತಾಯಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪತ್ ಕುಮಾರ್, ಇಂದಿರಾರತ್ನ ದತ್ತಿ ನಿಧಿ ಇಟ್ಟಿರುವ ರಾಜನ್ ಅವರನ್ನು ಸ್ಮರಿಸಿದರು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ರಾಣಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.