ಮೈಸೂರು: ಬಿಜೆಪಿ ಹಾಗೂ ಜೆಡಿಎಸ್ ನ ಹಾಲಿ ಹಾಗೂ ಮಾಜಿ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದು, ಸುಮಾರು 10ರಿಂದ 15 ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮಾತುಕತೆ ನಡೆಸುತ್ತಿರುವುದಾಗಿ ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಅವರು, ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಮುಂದಾಗಿರುವ ನಾಯಕರೊಂದಿಗೆ ಮಾತುಕತೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಎಲ್ಲವೂ ಕೂಡ ಅಂತಿಮವಾಗಲಿದೆ. ಅವರ ಹೆಸರು ಈಗ ಹೇಳಲು ಸಾಧ್ಯವಿಲ್ಲ ಎಂದರು.
ಗುತ್ತಿಗೆದಾರರಿಂದ ಹಣ ವಸೂಲಿ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿ, ಪ್ರಶ್ನೆ ಕೇಳುತ್ತಿದ್ದಂತೆ ಅಯ್ಯೋ ಬಿಡಪ್ಪ, ಕೆಲಸ ಇಲ್ಲದವರು ಮಾತನಾಡುವುದು. ಹಿಂದಿನ ಸರ್ಕಾರದ ಅವಧಿಯಲ್ಲಿ ಒಂದು ವರ್ಷ ಪೇಮೆಂಟ್ ಕೊಟ್ಟಿರಲಿಲ್ಲ. 2.5 ಲಕ್ಷ ಕೋಟಿ ಅನುದಾನವನ್ನ ಒಂದೇ ಸಲ ಎಷ್ಟೆಂದು ಕೊಡಲು ಆಗುತ್ತದೆ? ಎಂದು ಅವರು ಪ್ರಶ್ನಿಸಿದ್ರು.


