ತುಮಕೂರು: 15 ವರ್ಷ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಾಲಕಿ ಮಗುವಿಗೆ ಜನ್ಮ ನೀಡಲು ಕಾರಣನಾದ ಅಪರಾಧಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ(FTSC) ಪೋಕ್ಸೋ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ನಾಗೇಶ್ ಎಂಬ ಅಪರಾಧಿಯು ಪುರ ತಾಂಡ್ಯ ಹಾಗಲವಾಡಿ ಹೋಬಳಿಯ ಅಪ್ಪಣ್ಣನಹಳ್ಳಿಯವನಾಗಿದ್ದಾನೆ. ಈತ ನೊಂದ ಬಾಲಕಿಯ ಮನೆಗೆ ಕೆಲಸಕ್ಕಾಗಿ ಆಗಾಗ ಹೋಗಿ ಬರುತ್ತಿದ್ದನು. ಈ ವೇಳೆ ಬಾಲಕಿಗೆ ಪ್ರೀತಿ ಪ್ರೇಮ ಎಂಬ ನೆಪದಲ್ಲಿ ಪುಸಲಾಯಿಸಿ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ 7—8 ಬಾರಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ನೀಡಿದ್ದನು. ಇದರಿಂದಾಗಿ ಬಾಲಕಿಯು ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು ಎಂದು ಈ ಪ್ರಕರಣದ ತನಿಖಾಧಿಕಾರಿ ಚೇಳೂರು ಪೊಲೀಸ್ ಠಾಣೆಯ ಎಫ್.ಕೆ. ನಡಾಪ್ ಅವರು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ವೇಳೆ ನಾಗೇಶನ ಮೇಲಿರುವ ಆರೋಪ ಸಾಬೀತಾಗಿದ್ದು, ಗೌರವಾನ್ವಿತ ನ್ಯಾಯಾಲಯದ ನ್ಯಾಯಾಧೀಶರು ಅಪರಾಧಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿದ್ದಾರೆ. ದಂಡದ ಮೊತ್ತದಲ್ಲಿ ನೊಂದ ಬಾಲಕಿಗೆ 1.45 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಘನನ್ಯಾಯಾಲಯವು ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದರು.
ವರದಿ: ಶಿವಕುಮಾರ್ ಮೇಷ್ಟ್ರು ಮನೆ