ತುರುವೇಕೆರೆ : ಈ ಕ್ಷೇತ್ರದ ವಸತಿ ಯೋಜನೆ ಅಡಿಯಲ್ಲಿ ಬಂದಂತಹ ಮನೆಗಳನ್ನು ಮಸಾಲ ಜಯರಾಮ್ ರವರ ಕುಮ್ಮಕ್ಕಿನಿಂದ ಕುಣಿಗಲ್ ಕ್ಷೇತ್ರಕ್ಕೆ ನೀಡಲಾಗಿದೆ ಎಂಬ ಶಾಸಕ ಎಂ.ಟಿ.ಕೃಷ್ಣಪ್ಪನವರ ಮಾತು ಹಾಸ್ಯಾಸ್ಪದ ಎಂದು ಮಾಜಿ ಶಾಸಕ ಮಸಾಲ ಜಯರಾಮ್ ಹೇಳಿದ್ದಾರೆ.
ತಮ್ಮ ಫಾರ್ಮ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೋಂಗಿ ರಾಜಕಾರಣ ಮಾಡುವುದನ್ನು ಮೊದಲು ಬಿಡಿ ಎಂ.ಟಿ.ಕೃಷ್ಣಪ್ಪನವರೆ, ಕೊಟ್ಟ ಕುದುರೆಯನ್ನು ಏರದವನು ಶೂರನು ಅಲ್ಲ ಧೀರನು ಅಲ್ಲ, ತಾಲೂಕಿಗೆ ತಂದಂತಹ ಮನೆಗಳನ್ನು ಸರಿಯಾಗಿ ಬಳಸಿಕೊಳ್ಳಲಾಗದೆ ಅಸಹಾಯಕತೆಯಿಂದ ಈ ಮಾತನ್ನು ಆಡುತ್ತಿದ್ದಾರೆ. ಕೈಲಾಗದವನು ಮೈಯನ್ನು ಪರಚಿಕೊಂಡ ಎಂಬ ಗಾದೆ ಎಂ.ಟಿ.ಕೃಷ್ಣಪ್ಪರಂತಹವರನ್ನು ನೋಡಿ ಹಿರಿಯರು ಮಾಡಿರಬೇಕು ಎಂದರು.
2023ರವರೆಗೆ ಮಾಡುತ್ತಿದ್ದ ಕಾಮಗಾರಿಗಳನ್ನು ನನ್ನ ಅವಧಿಯಲ್ಲಿ ಆದಂತಹ ಕಾಮಗಾರಿಗಳು ಎಂದು ಸುಳ್ಳು ಹೇಳಿಕೊಂಡೆ ಓಡಾಡಿದ್ದಾರೆ, ಈಗಲೂ ನನಗೆ ಮನೆ ತರುವ ಸಾಮರ್ಥ್ಯವಿದೆ. ಮಾನ್ಯ ಸಂಸದರಾದ ಬಸವರಾಜ್ ಅವರ ಬಳಿ ಮಾತಾಡಿದ್ದೇನೆ. ಕೊಡುತ್ತೇನೆ ಎಂಬ ಭರವಸೆಯನ್ನು ನೀಡುತ್ತಿದ್ದಾರೆ, 1000 ಮನೆಗಳನ್ನು ಈ ಕ್ಷೇತ್ರಕ್ಕೆ ತಂದೆ ತರುತ್ತೇನೆ ಎಂದು ಈ ದಿನ ನಿಮ್ಮಗಳ ಮುಂದೆ ಹೇಳುತ್ತಿದ್ದೇನೆ
ತಾವುಗಳು ವಸತಿ ರಹಿತರ ಪಟ್ಟಿಯನ್ನು ಮಾಡಿಸಿ ಅರ್ಹ ಕುಟುಂಬಗಳಿಗೆ ಬಡತನದಲ್ಲಿರುವವರಿಗೆ ಹಂಚಿಕೆ ಮಾಡಿ, ತಂದ ಮೇಲು ತಾನೇ ತಂದಿದ್ದು ಎಂದು ಹೇಳಿಕೊಂಡು ಎಲ್ಲೂ ಓಡಾಡಬೇಡಿ, ನನ್ನ ಕುಮ್ಮಕ್ಕಿನಿಂದ ಎಂದು ಹೇಳುತ್ತಿದ್ದಾರೆ, ನಾನು ಸೋತ ಅಂದಿನ ದಿನದಿಂದನು ಇಲ್ಲಿಯವರೆಗೂ ವಿಧಾನಸೌಧದ ಮೆಟ್ಟಿಲನ್ನು ಹತ್ತಿಲ್ಲ, ಮತ್ತೊಮ್ಮೆ ನಾನು ಶಾಸಕನಾಗಿಯೋ ಅಥವಾ ಸಂಸದನಾಗೋ ವಿಧಾನಸೌಧದ ಮೆಟ್ಟಿಲನ್ನು ಹತ್ತುತ್ತೇನೆ. ಅಲ್ಲಿಯವರೆಗೂ ವಿಧಾನಸೌಧದ ಕಡೆಗೆ ತಿರುಗಿಯು ನೋಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಮೃತ್ಯುಂಜಯ, ಮುಖಂಡರಾದ ವಿ.ಬಿ.ಸುರೇಶ, ಕಾಳಂಜಿ ಹಳ್ಳಿ ಸೋಮಣ್ಣ ಸೇರಿದಂತೆ ಹಲವರು ಇದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ