ಬೆಂಗಳೂರು: ಕಲುಷಿತ ನೀರು ಸೇವನೆಯಿಂದ ಮರಣ ಪ್ರಕರಣಗಳು ಮರುಕಳಿಸಿದರೆ ಜಿ.ಪಂ ಸಿಇಒ ಗಳನ್ನು ನೇರವಾಗಿ ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುವುದು. ಹಾಗೂ ನಗರಸಭೆಗಳ ಆಯುಕ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಸಿಎಂ ಅಧ್ಯಕ್ಷತೆಯಲ್ಲಿ ಇಂದು ನಡೆದ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಭೆಯಲ್ಲಿ ಮಾತನಾಡಿ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಡವರು ವಾಸಿಸುವ ಕೊಳಗೇರಿಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಚರಂಡಿ ನೀರಿನ ಪೈಪುಗಳು ಪ್ರತ್ಯೇಕವಾಗಿರುವುದನ್ನು ಖಾತ್ರಿಪಡಿಸಬೇಕು. ಪ್ರತ್ಯೇಕ ಇಲ್ಲದಿರುವ ಸ್ಥಳಗಳನ್ನು ಗುರುತಿಸಿ ರಾಜ್ಯದಲ್ಲಿ ಈ ಕುರಿತು ನೈರ್ಮಲ್ಯ ಅಭಿಯಾನ ಕೈಗೊಂಡು 15 ದಿನಗಳಲ್ಲಿ ಈ ಕುರಿತು ವರದಿ ಸಲ್ಲಿಸಬೇಕೆಂದು ಸೂಚಿಸಿದರು.
ರಾಜ್ಯದಲ್ಲಿ ಕಲುಷಿತ ನೀರಿನ ಸೇವನೆಯಿಂದಾಗಿ 13-14 ಜನ ಸಾವಿಗೀಡಾಗಿದ್ದು, ಚಿತ್ರ ದುರ್ಗದಲ್ಲಿಯೇ 6-7 ಜನ ಅಸುನೀಗಿದ್ದಾರೆ. ಇದನ್ನು ತಪ್ಪಿಸಲು ಸಾಧ್ಯವಿದೆ. ಕೆಲವೆಡೆ ನಿರ್ವಹಣೆ ಇಲ್ಲದೆ ಇರುವುದರಿಂದ ಈ ರೀತಿ ಅವಘಡಗಳು ಸಂಭವಿಸುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.


