ತಿಪಟೂರು ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಚೌಡೇಶ್ವರಿ ದೇವಾಲಯದಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವರಮಹಾಲಕ್ಷ್ಮೀ ಹಾಗೂ ಚೌಡೇಶ್ವರಿ ದೇವಿಯ ಪೂಜಾ ಕಾರ್ಯಕ್ರಮ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.
ಚೌಡೇಶ್ವರಿ ದೇವಿಗೆ, ವರಮಹಾಲಕ್ಷ್ಮೀ ದೇವಿಯ ವಿಗ್ರಹಕ್ಕೆ ವಿಶೇಷ ಪೂಜೆ, ಹೋಮ, ಅಭಿಷೇಕಗಳನ್ನು ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಜಗತ್ತಿನ ಸೃಷ್ಠಿಗೆ ಮೂಲ ಜಗನ್ಮಾತೆ ದೇವಿಯೇ ಆಗಿದ್ದು ಆಕೆಯನ್ನು ಪೂಜಿಸುವ, ಆರಾಧಕರಾಗಬೇಕು. ಕಷ್ಟದ ಸಂದರ್ಭದಲ್ಲಿ ಮಾತ್ರವೇ ದೇವಿಯ ಬಳಿಯ ಬರುವ ಜೊತೆಗೆ ಸುಖ-ಸಂತಸದ ಸಂದರ್ಭದಲ್ಲಿಯೂ ದೇವಿಯ ಸೇವೆ ಮಾಡುವಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ದಸರೀಘಟ್ಟ ಶಾಖಾ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಆದಿಹಳ್ಳಿ ಶಾಖಾಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಗುಡಿಗೌಡರು ಕುಮಾರಸ್ವಾಮಿ ಸೇರಿದಂತೆ ಶ್ರೀಮಠ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಆನಂದ್ ತಿಪಟೂರು


