ಬೆಂಗಳೂರಿನಲ್ಲಿ ಬೀದಿ ನಾಯಿ ಹಾವಳಿಗೆ ಕೊಂಚ ಬ್ರೇಕ್ ಬಿದ್ದಿದೆ. ಬಿಬಿಎಂಪಿ ಕೈಗೊಂಡ ಬೀದಿ ನಾಯಿಗಳ ಗಣತಿ ಕಂಪ್ಲೇಟ್ ಆಗಿದೆ. ಕಳೆದ 2019ಕ್ಕೆ ಹೋಲಿಸಿದ್ರೆ ಈಗ ನಾಯಿಗಳ ಸಂಖ್ಯೆ ಶೇ. 30ಕ್ಕೆ ಇಳಿಕೆಯಾಗಿದೆ. ಬಿಬಿಎಂಪಿ ಪಶುಪಾಲನೆ ವಿಭಾಗ ಕಳೆದ ಜುಲೈನಲ್ಲಿ ಬೀದಿ ನಾಯಿಗಳ ಗಣತಿ ಆರಂಭಿಸಿತು. 2019 ರಲ್ಲಿ ನಡೆಸಿದ ಬೀದಿ ನಾಯಿ ಗಣತಿಯಲ್ಲಿ ನಗರದಲ್ಲಿ 3.09 ಲಕ್ಷ ಬೀದಿ ನಾಯಿಗಳಿದ್ದವು. ಇದೀಗ ಸುಮಾರು 2.20 ಲಕ್ಷದಷ್ಟು ಬೀದಿ ನಾಯಿಗಳು ಇವೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡು ಬಂದಿದೆ. ಬಿಬಿಎಂಪಿ ನಡೆಸಿದ ಸಮೀಕ್ಷೆಯ ವರದಿ ಪ್ರಕಾರ, ಬೀದಿ ನಾಯಿ ಹಾವಳಿ ಜೊತೆಗೆ ಕಡಿತ ಪ್ರಕರಣಗಳಿಗೂ ಕಡಿವಾಣ ಹಾಕಲಾಗಿದೆ. ಕಳೆದ 2019ರಲ್ಲಿ 42 ಸಾವಿರ ನಾಯಿ ಕಚ್ಚುವ ಪ್ರಕರಣ ದಾಖಲಾಗಿದ್ದವು. ಆದರೆ ಈಗ ಅದೇ ನಾಯಿ ಕಡಿತ ಪ್ರಕರಣಗಳ ಸಂಖ್ಯೆ 17 ಸಾವಿರಕ್ಕೆ ಇಳಿಕೆಯಾಗಿದೆ.


