‘ಜೈ ಭೀಮ್’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪರಮೇಶ್ವರಪ್ಪ IPS (ಪ್ರಕಾಶ್ ರಾಜ್) ಹಿಂದಿಯಲ್ಲಿ ಮಾತಾಡುತ್ತಿದ್ದ ಮಾರ್ವಾಡಿಯೊಬ್ಬನಿಗೆ ‘ಕನ್ನಡದಲ್ಲಿ (ತಮಿಳು, ತೆಲುಗು, ಮಲಯಾಳಂ) ಮಾತಾಡು’ ಎಂದು ಕೆನ್ನೆಗೆ ಬಾರಿಸಿರುವ ದೃಶ್ಯವು ಅನೇಕ ರೀತಿಯ ವಾಗ್ವಾದಗಳಿಗೆ ಕಾರಣವಾಗಿದೆ.
ಉತ್ತರ ಭಾರತದಿಂದ ದಕ್ಷಿಣ ಭಾರತಕ್ಕೆ ಬಂದು ಅನೇಕ ವರ್ಷಗಳ ಕಾಲ ಇಲ್ಲಿಯ ಸ್ಥಳೀಯರಾಗಿಯೇ ನೆಲೆ ಕಂಡುಕೊಂಡಿರುವ ಮಾರ್ವಾಡಿಗಳಿಗೆ ಹೀಗೆ ಸ್ಥಳೀಯ ಭಾಷೆಯಲ್ಲಿ ವ್ಯವಹರಿಸುವಂತೆ ಹೊಡೆದು ಬುದ್ಧಿ ಕಲಿಸಬೇಕಾದ ಅಗತ್ಯವಿದೆ ಎಂದು ‘ಜೈ ಭೀಮ್’ ಸಿನಿಮಾ ನೋಡಿದ ಬಳಿಕ ದಕ್ಷಿಣದ ಜನರಲ್ಲಿ ಜನಾಭಿಪ್ರಾಯ ಮೂಡುತ್ತಿದೆ.
ಪರಮೇಶ್ವರಪ್ಪ IPS
(ಪ್ರಕಾಶ್ ರಾಜ್) ಜಿಗುಟು ಹಿಂದಿ ಭಾಷಿಕ ಮಾರ್ವಾಡಿಗೆ ಹೊಡೆದಿರುವುದು ಸಿನಿಮಾದಲ್ಲಿ ನಟನೆಗಾಗಿ.
ಉತ್ತರ ಭಾರತದ ಮಾರ್ವಾಡಿಗಳು ದಕ್ಷಿಣ ಭಾರತೀಯರ ಆರ್ಥಿಕ ಉತ್ಪಾದನಾ ನೆಲೆಗಳನ್ನು ಕಬ್ಜಾ ಮಾಡಿಕೊಂಡಿರುವುದಲ್ಲದೆ ಸ್ಥಳೀಯ ಭಾಷೆಗಳ ಮೇಲೆ ಹಿಂದಿ ಭಾಷೆಯನ್ನು ಹೇರುತ್ತಾ ದಕ್ಷಿಣ ಭಾರತೀಯರ ಬದುಕಿನ ಮೇಲೆಯೇ ಹೊಡೆದಿದ್ದಾರೆ. ಇದಕ್ಕೆ ಯಾರು ಹೊಣೆ?
ಉತ್ತರ ಭಾರತದ ಮಾರ್ವಾಡಿಗಳು ಹಿಂದಿ ಭಾಷೆಯನ್ನು ದಕ್ಷಿಣ ಭಾರತದ ದ್ರಾವಿಡ ದೇಶಭಾಷಿಕರ ಸಾಮಾಜಿಕ ಹಾಗೂ ಸಾಂಸ್ಕೃತಿಕ ರಚನೆಗಳೊಳಕ್ಕೂ ನುಗ್ಗಿಸುವ ಮೂಲಕ ದ್ರಾವಿಡ ಜನಭಾಷೆ ಮತ್ತು ಸಂಸ್ಕೃತಿಯ ಸೊಬಗನ್ನು ಹಾಳುಮಾಡಿದ್ದಾರೆ. ಶಿಕ್ಷಣದಲ್ಲಿ ಹಿಂದಿ ಹೇರಿಕೆಯ ಮೂಲಕ ನಮ್ಮ ಸಾರ್ವಜನಿಕ ಅಥವಾ ಖಾಸಗಿ ಕೂಟಗಳಲ್ಲಿ ದೇಶಿಭಾಷೆ ಮಾತಾಡುವುದನ್ನೇ ಈ ಮಾರ್ವಾಡಿಗಳು ನಾಚಿಕೆಯ ಸಂಗತಿಯಾಗಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ನಾವೀಗ ಜನಭಾಷೆಗಳ ಸ್ವಾಭಿಮಾನಿ ಹೋರಾಟವನ್ನು ರೂಪಿಸುವ ಅನಿವಾರ್ಯತೆಯಲ್ಲಿದ್ದೇವೆ. ‘ಜೈ ಭೀಮ್’ ಸಿನಿಮಾದ ಕಪಾಳ ಮೋಕ್ಷ ದೃಶ್ಯವು ಇಂತಹ ಚಳವಳಿಯ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ.
ಕೇಂದ್ರ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಮಾತ್ರ ಉತ್ತರಿಸಬೇಕೆಂದು ಕಡ್ಡಾಯಗೊಳಿಸಿ ಇತರೆ ರಾಜ್ಯ ಭಾಷೆಗಳಲ್ಲಿ ಉತ್ತರಿಸುವುದನ್ನು ಕೈಬಿಡಲಾಗಿದೆ. ಹಿಂದಿ ಭಾಷೆಯನ್ನು ಅನಿವಾರ್ಯವಾಗಿ ಕಲಿಯುವ ಬಿಕ್ಕಟ್ಟನ್ನು ಸೃಷ್ಟಿಸಲಾಗಿದೆ.
ಕನ್ನಡ ಭಾಷೆಯು ಹುಟ್ಟು ಪಡೆದ ಸಾವಿರಾರು ವರ್ಷಗಳ ಬಳಿಕ ಹುಟ್ಟಿರುವ ಹಿಂದಿಯು ರಾಷ್ಟ್ರಭಾಷೆಯಲ್ಲ. ಹಿಂದಿ ರಾಷ್ಟ್ರಭಾಷೆ ಎಂಬ ಅಪಪ್ರಥೆಯನ್ನು ನಾವು ನೀಗಬೇಕು. ಹಿಂದಿಯು ಕನ್ನಡದಂತೆ ಒಂದು ರಾಷ್ಟ್ರೀಯ ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲ. ಅತ್ಯಂತ ಪ್ರಾಚೀನವಾದ ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಗಳ ಕಲಿಕೆಯನ್ನು ದಮನಿಸುವ ಹಿಂದಿ ಭಾಷಾ ಹೇರಿಕೆಯನ್ನು ದಕ್ಷಿಣ ಭಾರತೀಯರಾದ ನಾವು ಸಹಿಸಬಾರದು.
ಹೀಗಾಗಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಹಿಂದಿ ಭಾಷೆಯನ್ನು 3 ನೇ ಭಾಷೆಯಾಗಿ ಕಡ್ಡಾಯಗೊಳಿಸಿರುವುದನ್ನು ರದ್ದುಪಡಿಸಲು ಹೋರಾಟ ರೂಪಿಸುವ ಅಗತ್ಯವಿದೆ.
ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರುತ್ತಿರುವ ಉತ್ತರ ಭಾರತದ ಮಾರ್ವಾಡಿಗಳ ರಾಜಕೀಯ ಹುನ್ನಾರವನ್ನು ಪ್ರತಿರೋಧಿಸುವ ನಿಟ್ಟಿನಲ್ಲಿ ನಿರ್ದೇಶಕ ಜ್ಞಾನವೇಲ್ ಅವರು ಪೊಲೀಸ್ ತನಿಖಾಧಿಕಾರಿ ಪರಮೇಶ್ವರಪ್ಪ (ಪ್ರಕಾಶ್ ರಾಜ್) ನ ಕೈನಿಂದ ಹಿಂದಿ ಮಾತನಾಡುವ ಮಾರ್ವಾಡಿಯ ಕೆನ್ನೆಗೆ ಪಟೀರೆಂದು ಬಾರಿಸುತ್ತಾ, ‘ತಮಿಳಿನಲ್ಲಿ (ಕನ್ನಡ, ತೆಲುಗು, ಮಲಯಾಳಂ) ಮಾತಾಡು’ ಎಂದು ಜಬರಿಸುವ ಮೂಲಕ
ದಕ್ಷಿಣ ಭಾರತೀಯರು ದ್ರಾವಿಡ ಭಾಷಾ ಚಳವಳಿಯನ್ನು ಮತ್ತೊಮ್ಮೆ ಸಂಘಟಿಸುವ ಅಗತ್ಯವಿದೆ ಎಂಬುದನ್ನು ಸಾಂಕೇತಿಕವಾಗಿ ಮನಗಾಣಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಪಾತ್ರವು ಹಿಂದಿ ಮಾರ್ವಾಡಿಯ ಕೆನ್ನೆಗೆ ಬಾರಿಸಿರುವುದು ರೂಕ್ಷವಾಗಿ ಕಾಣಿಸಬಹುದು. ವಾಸ್ತವವಾದ ನಿಜ ಬದುಕಿನಲ್ಲಿ ಉತ್ತರ ಭಾರತದ ಹಿಂದಿ ಭಾಷೆಯನ್ನು ಹೇರುವುದರ ಮೂಲಕ ದಕ್ಷಿಣ ಭಾರತದ ದ್ರಾವಿಡ ಭಾಷಿಕರ ಆರ್ಥಿಕ ಮತ್ತು ಸಾಂಸ್ಕೃತಿಕ ಬದುಕಿನ ಬೇರುಗಳ ಮೇಲೆ ಹೊಡೆಯುತ್ತಿರುವುದು ಅಮಾನವೀಯವಾಗಿ ಕಾಣಿಸುತ್ತಿಲ್ಲವೇ? ದ್ರಾವಿಡ ಭಾಷಿಕರ ಬದುಕಿನ ಬೇರುಗಳನ್ನು ಕತ್ತರಿಸುತ್ತಿರುವ ಉತ್ತರ ಭಾರತೀಯ ಹಿಂದಿ ಭಾಷಿಕ ಮಾರ್ವಾಡಿಗಳ ಅಮಾನವೀಯ ರಾಜಕೀಯ ಹುನ್ನಾರಗಳನ್ನು ದಕ್ಷಿಣದ ದ್ರಾವಿಡರು ತಮ್ಮ ಸ್ವಾಭಿಮಾನವನ್ನು ಒತ್ತೆಯಿಟ್ಟು ಇನ್ನೆಷ್ಟು ಕಾಲದವರೆಗೆ ಸಹಿಸಬೇಕು?
ಡಾ.ವಡ್ಡಗೆರೆ ನಾಗರಾಜಯ್ಯ
8722724174