“ನಾವು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಗೆ ಪರಿಹಾರ ಎಂದು 500 ರೂ ಸೇರಿಸಿ ಮಹಿಳೆಯರಿಗೆ 2 ಸಾವಿರ ನೀಡುತ್ತಿದ್ದೇವೆ. ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿಯವರು ಗ್ಯಾಸ್ ಸಿಲಿಂಡರ್ ಬೆಲೆಯನ್ನ 200 ರೂಪಾಯಿ ಕಡಿಮೆ ಮಾಡಿದ್ದಾರೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಗೆ ಪ್ರಧಾನಿಗಳು ಹೆದರಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ ಬುಧವಾರ ಅವರು ಪ್ರತಿಕ್ರಿಯಿಸಿ, ಉಚಿತ ಕೊಡುಗೆಯಿಂದ ದಿವಾಳಿಯಾಗಲಿದ್ದೇವೆ ಎಂದವರು ಏಕೆ ಮಧ್ಯಪ್ರದೇಶದಲ್ಲಿ 1,500 ಕೊಡುತ್ತಿದ್ದಾರೆ, 200 ರೂಪಾಯಿ ಸಿಲಿಂಡರ್ ಬೆಲೆ ಏಕೆ ಇಳಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳ ಮಹಿಳೆಯರು ಕಾಂಗ್ರೆಸ್ ನವರು ಕೊಡುತ್ತಿದ್ದಾರೆ ನಿಮಗೆ ಏಕೆ ಆಗುತ್ತಿಲ್ಲ ಎಂದು ಬೈಯ್ಯುತ್ತಿದ್ದಾರೆ, ಅದಕ್ಕೆ ಬಿಜೆಪಿ ಸರ್ಕಾರ ಕರ್ನಾಟಕ ಮಾದರಿ ಅನುಸರಿಸುತ್ತಿದೆ. ಈ ದೇಶದ ಜನರಿಗೆ ಹಣ ಕೊಡಲು ನಮ್ಮದೇನು ತಕರಾರಿಲ್ಲ. ಆದರೆ “ಕರ್ನಾಟಕ ಮಾದರಿ”ಯಿಂದ ಹೆದರಿಕೊಂಡಿದ್ದಾರೆ ಎಂಬುದು ಸತ್ಯ ಎಂದು ಅವರು ಹೇಳಿದರು.
ಶಕ್ತಿ, ಗೃಹಜ್ಯೋತಿ, ಅನ್ನ ಭಾಗ್ಯ ಎಲ್ಲಾ ಗ್ಯಾರಂಟಿಗಳು ಯಶಸ್ವಿಯಾಗಿವೆ. ಇದರಿಂದ ಇಡೀ ದೇಶದ ಹೆಣ್ಣು ಮಕ್ಕಳು “ಕರ್ನಾಟಕ ಮಾದರಿ”ಗೆ ಮನಸೋತಿದ್ದಾರೆ. ನಾವು 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಕಾಂಗ್ರೆಸ್ ಪಕ್ಷದ ಇದನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದೆ, ಜನರು ಸಂಭ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದರು.


