ಬಿಬಿಎಂಪಿ ವ್ಯಾಪ್ತಿಗೆ ಬರುವ ಉಲ್ಲಾಳು ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತಿರುವ ಹಿನ್ನೆಲೆಯಲ್ಲಿ ಕೆರೆಯನ್ನು ಸ್ವಚ್ಛಗೊಳಿಸಲು ಜೈವಿಕ ರಾಸಾಯನಿಕ ಹಾಕುವ ಕಾರ್ಯ ಆರಂಭಗೊಂಡಿದೆ.
ಉದ್ಯಾನದ ಮಣ್ಣು, ಸೂಕ್ಷ್ಮ ಜೀವಾಣುಗಳು, ಕಾಕಂಬಿ, ಭತ್ತದ ತೌಡು ಮಿಶ್ರಣ ಮಾಡಿದ ಬೊಕಾಶಿ ಬಾಲ್ ಹಾಕಿ ಸ್ವಚ್ಛಗೊಳಿಸುವ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎಂದು ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ವಿಜಯಕುಮಾರ್ ಹರಿದಾಸ್ ತಿಳಿಸಿದ್ದಾರೆ.
ಕೆರೆಯಲ್ಲಿ ನೀರು ಕಡಿಮೆಯಾಗಿ, ಇರುವ ನೀರು ಕಲುಷಿತಗೊಂಡು ಮೀನುಗಳು ಸತ್ತಿದ್ದವು. ಒಂದು ವಾರದಿಂದ ಮೀನು ಸಾಯುತ್ತಿದ್ದರೂ ಯಾರೂ ಭೇಟಿ ನೀಡಿ ಪರಿಶೀಲಿಸುವ, ಸತ್ತ ಮೀನು ತೆರವುಗೊಳಿಸುವ ಕಾರ್ಯ ಮಾಡಿರಲಿಲ್ಲ. ಇದರಿಂದ ದುರ್ವಾಸನೆ ಉಂಟಾಗಿತ್ತು.
ಸತ್ತ ಮೀನುಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು. ಕೆರೆಯ ಮಣ್ಣನ್ನು ಪರೀಕ್ಷೆಗೆ ಒಯ್ಯಲಾಯಿತು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ನವೀನ್, ಎಇಇ ಮಹೇಶ್, ಜಲಮಂಡಳಿ ಎಇಇ ಸೈಯದ್ ಇದ್ದರು.


