ಬೆಂಗಳೂರು: ದಾಖಲೆ ಪರಿಶೀಲನೆ ನಡೆಸದೆ ಅವಧಿಗೂ ಮುನ್ನ ಪಿಂಚಣಿ ಮಂಜೂರು ಮಾಡಿದ ಉಪ ತಹಸೀಲ್ದಾರ್ ಸೇರಿ ಐವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಖಲೆ ಪರಿಶೀಲನೆ ನಡೆಸದೆ ಅವಧಿಗೂ ಮುನ್ನ ಪಿಂಚಣಿ ಮಂಜೂರು ಮಾಡಿದ ಉಪ ತಹಸೀಲ್ದಾರ್ ಸೇರಿ ಐವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು ತಹಸೀಲ್ದಾರ್ ಎಚ್. ಶ್ರೀನಿವಾಸ್, ಈ ಕುರಿತು ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ಬೆಂಗಳೂರು ದಕ್ಷಿಣ ತಾಲ್ಲೂಕು ಉಪತಹಸೀಲ್ದಾರ್ ಅಂಜನ್‌ಕುಮಾರ್, ರಾಜಸ್ವ ನಿರೀಕ್ಷಕ ಮಂಜುನಾಥ ರೆಡ್ಡಿ ಮತ್ತು ಮಾಶಾಸನಕ್ಕೆ ನಕಲಿ ದಾಖಲೆ ಸಲ್ಲಿಸಿದ್ದ ನಾಗಮಣಿ, ಜಯರಾಮ್ ಮತ್ತು ಮಹದೇವ ಎಂಬುವರ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
60 ವರ್ಷ ಮೇಲ್ಪಟ್ಟವರು ಮಾಶಾಸನ/ಪಿಂಚಣಿಗೆ ಅರ್ಜಿ ಸಲ್ಲಿಸಲು ಅರ್ಹ ಆಗಿರುತ್ತಾರೆ. ಆದರೆ, ನಾಗಮಣಿ, ಜಯರಾಮ್ ಮತ್ತು ಮಹದೇವ ಎಂಬುವರು, ಅರ್ಹತೆ ಇಲ್ಲದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ಅರ್ಜಿ ಸಲ್ಲಿಸಿದ್ದರು.
ಮಾಶಾಸನದ ಅರ್ಜಿ ಮತ್ತು ದಾಖಲೆ ಪತ್ರಗಳ ನೈಜತೆಯನ್ನು ಪರೀಕ್ಷೆ ನಡೆಸದೆ ಉಪ ತಹಸೀಲ್ದಾರ್ ಮತ್ತು ರಾಜಸ್ವ ನಿರೀಕ್ಷಕ ನಿರ್ಲಕ್ಷ್ಯ ವಹಿಸಿದ್ದರು. ನಕಲಿ ದಾಖಲೆ ಆಧಾರದ ಮೇಲೆ ಮೂವರಿಗೆ ಮಾಶಾಸನ ಮಂಜೂರು ಮಾಡಿ ಪ್ರಮಾಣ ಪತ್ರ ವಿತರಿಸಿದ್ದರು.


