ತುಮಕೂರು: ಕ್ಷೀರಭಾಗ್ಯ ಯೋಜನೆ ಜಾರಿಗೊಂಡು ಹತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6 ರಂದು ಮಧುಗಿರಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ “ಕ್ಷೀರಭಾಗ್ಯ” ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಿಳಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕ್ಷೀರಭಾಗ್ಯ ಯೋಜನೆಗೆ ದಶಮಾನೋತ್ಸವ ಸಂಭ್ರಮ. ಈ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮಕ್ಕಾಗಿ ಮಧುಗಿರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನೊಳಗೊಂಡಂತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧುಗಿರಿಯಲ್ಲಿ ರಾಜ್ಯಮಟ್ಟದ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಅಭೂತಪೂರ್ವ ಕಾರ್ಯಕ್ರಮದ ಅಗತ್ಯತೆಗಳ ಕೆಲಸ ಭರದಿಂದ ಸಾಗಿದೆ ಎಂದರು.
ಮಧುಗಿರಿ ಪಟ್ಟಣಕ್ಕೆ ಸೆ. 6ರಂದು ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದ ಅವರು, ಈ ದಶಮಾನೋತ್ಸವ ಕಾರ್ಯಕ್ರಮಯದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಗ್ರಾಮೀಣ ಜನರ ಆರ್ಥಿಕಾಭಿವೃದ್ಧಿಗೆ ಹೈನುಗಾರಿಕೆ ಹೆಚ್ಚು ಪೂರಕ. ಹಾಗಾಗಿ ಹಳ್ಳಿಗಳಲ್ಲಿ ಹೈನುಗಾರಿಕೆ ಮತ್ತಷ್ಟು ಹೆಚ್ಚಾಗಬೇಕು. ಜತೆಗೆ ಹೆಚ್ಚಿನ ಗುಣಮಟ್ಟದ ಪದಾರ್ಥ ನೀಡುವ ಕೆಲಸವನ್ನು ಹಾಲು ಒಕ್ಕೂಟ ಮಾಡುತ್ತಿದೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಈ ಕಾರ್ಯಕ್ರಮದ ನೇತೃತ್ವವನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಹಿಸಿಕೊಂಡಿದ್ದಾರೆ. ನಮ್ಮ ಜಿಲ್ಲಾಡಳಿತದ ಎಲ್ಲಾ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಅಧಿಕಾರಿಗಳು ಶ್ರಮ ವಹಿಸಿ ಕೆಲಸ ಮಾಡುವುದರೊಂದಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ಮಧುಗಿರಿಯ ಇತಿಹಾಸದಲ್ಲಿ ಈ ಹಿಂದೆ ಎಂದೂ ನೋಡದ ಕ್ಷೀರಭಾಗ್ಯ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕಾಗಿ ಕೆಎಂಎಫ್ ಅಧ್ಯಕ್ಷರಾದ ಭೀಮನಾಯ್ಕ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಕ್ಷೀರಭಾಗ್ಯ ಯೋಜನೆಯು ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜಾರಿಯಾಯಿತು. ಮಕ್ಕಳ ಪೌಷ್ಟಿಕತೆಗೆ ಸಹಾಯವಾಗಲಿ ಎಂದು ಅಂದು ಜಾರಿಗೆ ತಂದಿದ್ದರು. ಇದರಿಂದ ರಾಜ್ಯದಲ್ಲಿ ಸುಮಾರು 65 ಲಕ್ಷ ಮಕ್ಕಳಿಗೆ ಅನುಕೂಲವಾಗಿದೆ ಎಂದರು.
1 ರಿಂದ 10ನೇ ತರಗತಿ ಮಕ್ಕಳಿಗೆ ಅನುಕೂಲವಾಗುವ ಕಾರ್ಯಕ್ರಮ ಇದಾಗಿದ್ದು, 10 ವರ್ಷದ ಸಂಭ್ರಮವನ್ನು ಆಚರಣೆ ಮಾಡಲು ತೀರ್ಮಾನಿಸಿದ್ದು, ಸಹಕಾರಿ ಸಚಿವರು ಐತಿಹಾಸಿಕ ಸಮಾರಂಭವನ್ನು ಮಧುಗಿರಿಯಲ್ಲಿ ಏರ್ಪಡಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸುಮಾರು 156 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 13 ಮಳಿಗೆಗಳನ್ನು ಸ್ಥಾಪಿಸಿ ಜನರಿಗೆ ಅನುಕೂಲವಾಗುವ ಮಾರ್ಗದರ್ಶನ ಮಾಡಲಾಗುತ್ತದೆ ಎಂದರು.
ನಾವು ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳಿಗೆ ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ಮಾಡಿದರು. ಆದರೆ ಇಂದು ನಮ್ಮ ಸರ್ಕಾರ ಟೀಕೆಗಳನ್ನು ಸುಳ್ಳು ಮಾಡಿದೆ. ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಅನುಷ್ಟಾನ ಮಾಡಿದ್ದೇವೆ ಎಂದರು.
ಪ್ರತಿ ಜಿಲ್ಲೆಯಲ್ಲೂ ಗ್ಯಾರಂಟಿ ಯೋಜನೆಯ ಕಾರ್ಯಕ್ರಮ ಯಶಸ್ವಿಯಾಗಿದೆ. 2 ಕೋಟಿ 19 ಲಕ್ಷ ಗ್ರಾಹಕರಿಗೆ ವಿದ್ಯುತ್ ಉಚಿತವಾಗಿ ಕೊಡಲಾಗುತ್ತಿದೆ. ಸುಮಾರು 13,910 ಕೋಟಿಯಷ್ಟು ವಿದ್ಯುತ್ ಗ್ರಾಹಕರಿಗೆ ಸೇರಿದೆ ಎಂದು ಅವರು ಹೇಳಿದರು.
ಗೃಹಲಕ್ಷ್ಮಿ ಯೋಜನೆ 1.28 ಕೋಟಿ ಮಹಿಳೆಯರಿಗೆ ಸಹಕಾರವಾಗಿದೆ. 33 ಸಾವಿರ ಕೋಟಿ ಒಂದು ವರ್ಷಕ್ಕೆ ವೆಚ್ಚವಾಗಲಿದೆ. ಶಕ್ತಿ ಯೋಜನೆಯಡಿ ಮೂರು ತಿಂಗಳಲ್ಲಿ 1.5 ಕೋಟಿ ಮಹಿಳೆಯರು ತುಮಕೂರು ಜಿಲ್ಲೆಯಲ್ಲಿ ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ ಎಂದರು.
ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿಗೆ ಹಣ ಕೊಡುತ್ತಿದ್ದೇವೆ ಎಂದ ಅವರು, ರಾಜ್ಯದಲ್ಲಿ 1.28 ಕೋಟಿ ಪಡಿತರ ಚೀಟಿದಾರರಿದ್ದಾರೆ. ಇದರಿಂದ ಅವರಿಗೆ ಅನುಕೂಲವಾಗುತ್ತಿದೆ ಎಂದರು.
ಈ ಬಾರಿ ದಾವಣಗೆರೆ, ತುಮಕೂರು, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಹಲವೆಡೆ ಮುಂಗಾರು ವಿಫಲವಾಗಿದೆ. ಹಾಗಾಗಿ ಬರಪೀಡಿತ ಜಿಲ್ಲೆಗಳ ಘೋಷಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದ ಅವರು, ತುಮಕೂರು ಜಿಲ್ಲೆಯಲ್ಲಿ ಶೇ.೯೮ರಷ್ಟು ಮಳೆ ವಿಫಲವಾಗಿದೆ. ಆದ್ದರಿಂದ ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.
ಸಿಲ್ಕ್ ಮಿಲ್ಕ್ ನಮ್ಮನ್ನು ಉಳಿಸಿದೆ. ಈ ಯೋಜನೆ ನಮ್ಮ ಭಾಗಕ್ಕೆ ಉತ್ತೇಜನ ನೀಡಲು ಸಹಕಾರ ಆಗುತ್ತಿದೆ. ಹಾಗಾಗಿ ನಿಮ್ಮ ಸಹಾಯ ಹಸ್ತ ನಮಗಿರಬೇಕು ಎಂದು ಕೇಳಿ ಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್, ಶಾಸಕರಾದ ಹೆಚ್.ವಿ. ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಕೆಎಂಎಫ್ ಎಂಡಿ ಜಗದೀಶ್, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಉಪವಿಭಾಗಾಧಿಕಾರಿ ರಿಷಿ ಆನಂದ್, ತಹಶೀಲ್ದಾರ್ ಸಿಬ್ಗತ್ವುಲ್ಲಾ, ಜಿಲ್ಲಾ ಮಟ್ಟದ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.


