ಬಾಗಲಕೋಟೆ: ಧಕ್ಷಿಣ ಕರ್ನಾಟಕದ ಪ್ರಮುಖ ಜಾನಪದ ಕಲೆಗಳಲ್ಲಿ ಒಂದಾದ ಕಂಸಾಳೆ ಭಕ್ತಿ ನೃತ್ಯವನ್ನು ಬೆಂಗಳೂರು ಬಿಡದಿಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿಧ್ಯಾರ್ಥಿನಿಯರಿಂದ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಪ್ರದರ್ಶನ ಮಾಡಲಾಯಿತು.
ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯಗಳ ಸಹಯೋಗದಲ್ಲಿ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಾಡುತ್ತ ಭಾವಾವೇಶದಿಂದ ನೃತ್ಯಮಾಡುವ ಮಲೆ ಮಾದೇಶ್ವರನನ್ನು ಆರಾಧಿಸುವ ಮತ್ತು ಪೂಜಿಸವ ಜಾನಪದ ಕಲೆ ಇದಾಗಿದ್ದು ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ಮಾಡಿದರು.
ಈ ವೇಳೆ ಬಿಡದಿ ಬಸವೇಶ್ವರ ಪದವಿ ಕಾಲೇಜಿನ ನಿರ್ದೇಶಕರಾದ ಡಾ. ವ್ಹಿ ಎಸ್ ಕಟಗಿಹಳ್ಳಿಮಠ ಅವರು ಮಾತನಾಡಿ ಚಾಮರಾಜ ನಗರ ಜಿಲ್ಲೆಯ ಧಾರ್ಮಿಕ ಕುಣಿತ ಇದಾಗಿದೆ. 15 ನೇ ಶತಮಾನದಲ್ಲಿ ಮಹಾದೇಶ್ವರ ಎನ್ನುವವರು ಕಂಸಾಳೆ ನೃತ್ಯದ ಮೂಲಕ ಭಗವಂತನನ್ನು ಒಲಿಸಿಕೊಳ್ಳುತ್ತಾನೆ. ಅಂದಿನಿಂದ ಕಂಸಾಳೆ ಧ್ವನಿಯಲ್ಲಿ ಶಿವನು ನೆಲಸಿದ್ದಾನೆ ಎಂಬ ಭಾವನೆಯಲ್ಲಿ ನೃತ್ಯ ಮಾಡಲಾಗುತ್ತದೆ. ಇದು ಓಂಕಾರದ ನಿನಾದದ ಒಂದು ಭಾಗವಾಗಿದ್ದು ಆ ಭಾಗದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಈ ಭಾಗದಲ್ಲಿ ಕಲೆಯನ್ನು ಪರಿಚಯಿಸುವ ಉದ್ದೇಶದಿಂದ ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನೃತ್ಯ ಪ್ರದರ್ಶನದಲ್ಲಿ ವಿದ್ಯಾರ್ಥಿನಿಯರುಗಳಾದ ಸೌಂದರ್ಯ. ಶಿಂಧು, ಹರ್ಷಿತಾ, ಸೃಜನಾ, ಅಮೃತಾ, ಅನುಶಾ, ಪೂರ್ಣಿಮಾ ಮತ್ತು ಮಾನಸಾ ಹೆಜ್ಜೆ ಹಾಕಿದರು. ಮೈಸೂರು ಗಂಗುಬಾಯಿ ಹಾನಗಲ್ ವಿವಿ ಪ್ರಾದ್ಯಾಪಕರಾದ ವಿಶ್ವನಾಥ ನೃತ್ಯ ನಿರ್ಧೇಶನ ಮಾಡಿದರು. ವ್ಯವಸ್ಥಾಪಕ ನಿರ್ದೇಶಕರಾಗಿ ಪ್ರಾದ್ಯಾಪಕ ಪ್ರಶಾಂತ ಬಡಿಗೇರ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಮಹಾಂತೇಶ ಶೆಟ್ಟರ, ಪ್ರಾಚಾರ್ಯರುಗಳಾದ ಎಸ್.ಜೆ ಒಡೆಯರ್, ಡಾ.ಎಸ್.ಎಮ್ ಗಾಂವಕರ್, ಡಾ. ಜೆ.ಬಿ ಚವ್ಹಾಣ ಸೇರಿದಂತೆ ವಿವಿಧ ಕಾಲೇಜುಗಳು ಪ್ರಾದ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ವಂದಿಸಿದರು.