ಹೆಚ್.ಡಿ.ಕೋಟೆ: ಗೌರಿ ಗಣೇಶ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಹೆಚ್.ಡಿ.ಕೋಟೆ ಪಟ್ಟಣದಲ್ಲಿ ಹುಣಸೂರು ವಿಭಾಗೀಯಪೊಲೀಸ್ ಮತ್ತು ಹೆಚ್.ಡಿ.ಕೋಟೆ ಪೊಲೀಸರಿಂದ ಪಥ ಸಂಚಲನ ನಡೆಸಲಾಯಿತು.
ಹುಣಸೂರು ವಿಭಾಗೀಯ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮತ್ತು ಹೆಚ್.ಡಿ.ಕೋಟೆ ವೃತ್ತನಿರೀಕ್ಷಕ ಶಬ್ಬೀರ್ ಹುಸೇನ್ ನೇತೃತ್ವದಲ್ಲಿ ಹೆಚ್.ಡಿ.ಕೋಟೆ ಪಟ್ಟಣದ ವರದರಾಜ ಸ್ವಾಮಿ ದೇವಾಲಯ ರಸ್ತೆ,ನಾಯಕರ ಬೀದಿ, ಸಿದ್ದಪ್ಪಾಜಿ ರಸ್ತೆ,ಹೌಸಿಂಗ್ ಬೋರ್ಡ್, ವಿದ್ಯಾನಗರ,ಆಸ್ಪತ್ರೆ ಬಡಾವಣೆ , ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಲಾಯಿತು.
ಬಳಿಕ ಡಿವೈಎಸ್ಪಿ ಮಹೇಶ್ ಮಾತನಾಡಿ, ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳ ಅಂಗವಾಗಿ ಹೆಚ್ ಡಿ ಕೋಟೆಯಲ್ಲಿ ಪಥ ಸಂಚಲನ ನಡೆಸಲಾಯಿತು. ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಪೊಲೀಸರು, ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳೊಂದಿಗೆ ಪಥ ಸಂಚಲನ ನಡೆಸಿ, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಾಲ್ಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯಾವುದೇ ಘಟನೆ ನಡೆದರು ಕೂಡಲೇ ತಮ್ಮ ಹತ್ತಿರದ ಪೊಲೀಸ್ ಠಾಣೆಗಳಿಗೆ ತಿಳಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪನಿರೀಕ್ಷಕರಾದ ಪ್ರಕಾಶ್, ಸುರೇಶ್ ನಾಯಕ್, ರವಿಶಂಕರ್,ರಾಮು ಸೇರಿದಂತೆ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.
ವರದಿ: ಮಲಾರ ಮಹದೇವಸ್ವಾಮಿ


