ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಮಂಗಳವಾರದ ಬೆಂಗಳೂರು ಬಂದ್ನ ನಂತರ ಕನ್ನಡ ಪರ ಸಂಘಟನೆಗಳು ನಾಳೆ ಶುಕ್ರವಾರ ಇನ್ನಷ್ಟು ತೀವ್ರವಾಗಿ ಅಖಂಡ ಕರ್ನಾಟಕ ಬಂದ್ಗೆ ಸಿದ್ಧತೆ ನಡೆಸಿವೆ.
ಶುಕ್ರವಾರ ಇನ್ನಷ್ಟು ತೀವ್ರವಾಗಿ ಅಖಂಡ ಕರ್ನಾಟಕ ಬಂದ್ಗೆ ಸಿದ್ಧತೆ ನಡೆಸಿವೆ. ಕರ್ನಾಟಕದ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು, ರೈಲು ಸಂಚಾರಕ್ಕೆ ಅಡ್ಡಿಪಡಿಸಲು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಚಳವಳಿಗಾರರು ಯೋಜಿಸಿದ್ದಾರೆ.
ನಿನ್ನೆ ಬುಧವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಬಂದ್ಗೆ ಬೆಂಬಲ ಕೋರಲಾಗಿದೆ. ಕೆಎಫ್ ಸಿಸಿ ಅಧ್ಯಕ್ಷ ಎನ್ಎಂ ಸುರೇಶ್ ಬಂದ್ ಗೆ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ ಮತ್ತು ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಾದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು, ಚಲನಚಿತ್ರಗಳ ಪ್ರದರ್ಶನ ಇತ್ಯಾದಿಗಳನ್ನು ನಾಳೆ ನಿಲ್ಲಿಸಲಾಗುವುದು ಎಂದು ಹೇಳಿದರು. ಬಂದ್ ಅಂಗವಾಗಿ ಹಮ್ಮಿಕೊಂಡಿರುವ ರ್ಯಾಲಿಯಲ್ಲಿ ಸ್ಟಾರ್ ನಟರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕ್ಯಾಬ್ ಮತ್ತು ಆಟೋರಿಕ್ಷಾ ಚಾಲಕರ ಸಂಘಗಳು ಸಹ ಬಂದ್ ಗೆ ಬೆಂಬಲ ನೀಡಿವೆ, ಆದರೆ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘವು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪರಿಸ್ಥಿತಿಯನ್ನು ಅವಲೋಕಿಸಿ ಇಂದು ಸಂಜೆಯೊಳಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ. ಉದ್ಯಮ ಸಂಸ್ಥೆಗಳು ಮತ್ತು ಹೋಟೆಲ್ ಸಂಘಗಳು ಇನ್ನೂ ಬಂದ್ ಕರೆ ಬಗ್ಗೆ ನಿರ್ಧರಿಸಿಲ್ಲ ಎಂದು ತಿಳಿದು ಬಂದಿದೆ.


