ಬೆಂಗಳೂರು: ಯಲಹಂಕ ಬಳಿಯ ಚೊಕ್ಕನಹಳ್ಳಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಭಾರತೀಯ ನೌಕಾಪಡೆಯ 74 ವರ್ಷದ ನಿವೃತ್ತ ಎಂಜಿನಿಯರ್ ಮೇಲೆ ಹಲ್ಲೆ ನಡೆದಿದೆ.
ಸ್ಥಳೀಯ ನಿವಾಸಿಯೊಬ್ಬರು ಮರದ ಹಲಗೆಯಿಂದ ಹೊಡೆದಿದ್ದು, ಗಾಯಗೊಂಡಿರುವ ವೃದ್ಧನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೊಕ್ಕನಹಳ್ಳಿಯ ಎನ್ ಆರ್ ಲೇಔಟ್ ನಿವಾಸಿ ಕೆ. ಅಮರನಾಥ ಚವ್ಹಾಣ್ ಹಲ್ಲೆಗೊಳಗಾದ ವ್ಯಕ್ತಿ.
ಚೊಕ್ಕನಹಳ್ಳಿಯ ಎಸ್ ಮತ್ತು ಎನ್ ಲೇಔಟ್ ನಲ್ಲಿ ಭಾನುವಾರ ಬೆಳಗ್ಗೆ 7:15 ರಿಂದ 7:30 ರ ನಡುವೆ ಅವರ ಮೇಲೆ ಹಲ್ಲೆ ನಡೆದಿದೆ. ಕಳೆದ ಮೂರು ವರ್ಷಗಳಿಂದ ಈ ಪ್ರದೇಶದ ನಿವಾಸಿಯಾಗಿರುವ ಅವರು ಪ್ರತಿದಿನ ಬೆಳಗ್ಗೆ 7 ರಿಂದ 7:45 ರವರೆಗೆ ವಾಕಿಂಗ್ ಹೋಗುತ್ತಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.


