ಉಡುಪಿ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಪತಿ–ಪತ್ನಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುಂದಾಪುರ ಹೆಮ್ಮಾಡಿ ಸಮೀಪದ ಸುಳ್ಸೆ ಕರಣಿಕರ ಮನೆ ಬಳಿ ನಡೆದಿದೆ.
ಮಹಾಬಲ ದೇವಾಡಿಗ (55) ಮತ್ತು ಅವರ ಪತ್ನಿ ಲಕ್ಷ್ಮಿ (48) ಮೃತಪಟ್ಟವರಾಗಿದ್ದಾರೆ. ಸುಳ್ಸೆಯ ಯಕ್ಷಿ ಬ್ರಹ್ಮ ನಂದಿಕೇಶ್ವರ ದೇವಸ್ಥಾನದ ಬಳಿ ಈ ದಂಪತಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮಹಾಬಲ ದೇವಾಡಿಗ ದಿನಗೂಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪತಿ ಮನೆಗೆ ಬಾರದಿರುವುದನ್ನು ಗಮನಿಸಿದ ಲಕ್ಷ್ಮಿ ತನ್ನ ಪತಿಯನ್ನು ಹುಡುಕಿಕೊಂಡು ಹೋದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದನ್ನು ನೋಡಿದ್ದಾಳೆ. ಪತಿಯನ್ನು ರಕ್ಷಿಸಲು ಹೋಗಿ ಆಕೆಯು ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.


