ಬೆಂಗಳೂರು: “ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಅಂತಿಮ ತೆರೆ ಎಳೆಯಲು ಕೇಂದ್ರ ಸರಕಾರವು ನಾಲ್ಕು ರಾಜ್ಯಗಳ ಜತೆ ಚರ್ಚೆ ಮಾಡಿ ಸಂಕಷ್ಟ ಸೂತ್ರ ರೂಪಿಸಬೇಕು” ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ಅಭಿಪ್ರಾಯ ಪಟ್ಟರು.
ಚಿತ್ರಕಲಾ ಪರಿಷತ್ ನಲ್ಲಿ ಕಾವೇರಿ ಸಮಸ್ಯೆ ಬಗ್ಗೆ ಮಾಧ್ಯಮಗಳು ಭಾನುವಾರ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಹೀಗೆ ಹೇಳಿದರು.
ನಾಲ್ಕು ರಾಜ್ಯಗಳ ಜತೆ ಚರ್ಚಿಸಿ ಯೋಗ್ಯ ತೀರ್ಮಾನ ತೆಗೆದುಕೊಳ್ಳಬೇಕು. ಶಾಶ್ವತ ಪರಿಹಾರಕ್ಕೆ ಇದೊಂದೇ ಮಾರ್ಗ.
“ಮಳೆ ಕಡಿಮೆ ಆದಾಗ ಕಾವೇರಿ ವಿವಾದ ಸದ್ದು ಮಾಡುತ್ತದೆ. ಮಳೆಗಾಲದಲ್ಲಿ ನೀರಿನ ಪ್ರಮಾಣ ಕುಸಿದಾಗ ನೀರಿಗೆ ಒತ್ತಡ ಇರುತ್ತದೆ. ನಮಗೆ ಹೋಲಿಸಿದರೆ ತಮಿಳುನಾಡಿನ ವಸ್ತುಸ್ಥಿತಿ ನಾಚಿಸುವಂತೆ ಇದೆ.
ನಾನು ಸಿಎಂ ಆಗಿದ್ದಾಗಲೂ ಕಾವೇರಿ ನೀರು ಹಂಚಿಕೆ ಬಗ್ಗೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆಗ ಪ್ರಧಾನಿಗಳಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಉಭಯ ರಾಜ್ಯಗಳ ಸಿಎಂಗಳ ಜೊತೆ ಸಂಧಾನ ಮಾಡಲು ಪ್ರಯತ್ನಿಸಿದ್ದರು. ಆದರೆ ಸಫಲ ಆಗಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಬೇಕಾಯ್ತು.”


