ಶಿವಮೊಗ್ಗ: ಸೆಪ್ಟೆಂಬರ್ 30ರಂದು ನಡೆದ ಈದ್ ಮೆರವಣಿಗೆ ವೇಳೆ ಸಂಭವಿಸಿದ ಘರ್ಷಣೆಗೆ ಸಂಬಂಧಿಸಿದಂತೆ ತಲವಾರು ಝಳಪಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಮಧು ಬಂಗಾರಪ್ಪ ನೀಡಿರುವ ಹೇಳಿಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಗಾಯಾಳುಗಳ ಭೇಟಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಶಿವಮೊಗ್ಗದಲ್ಲಿ ದೊಡ್ಡ ಮಟ್ಟದಲ್ಲಿ ಗಲಭೆ ಏನು ನಡೆದಿಲ್ಲ. ಸಾರ್ಜನಿಕರು ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ. ಶಿವಮೊಗ್ಗದಲ್ಲಿ ಈ ಘಟನೆ ಆಗಬಾರದಿತ್ತು. ಗಾಯಾಳುಗಳಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ಮಾಡುತ್ತೇನೆ. ಕೊಡುವುದಾದರೆ ಸರ್ಕಾರದಿಂದ ಕೊಡಿಸುತ್ತೇನೆ. ಪೊಲೀಸರು ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಶಿವಮೊಗ್ಗ ಶಾಂತಿಯಿಂದ ಇದೆ, ಜನ ಸಹಕರಿಸುತ್ತಿದ್ದಾರೆ. ಕಾನೂನು ಹದ್ದುಬಸ್ತು ಮಾಡಬೇಕು. ಅಧಿಕಾರಿಗಳು ಆ ಕೆಲಸ ಮಾಡುತ್ತಿದ್ದಾರೆ.
ಗಣಪತಿ ಹಬ್ಬ ಚೆನ್ನಾಗಿ, ಅದ್ಧೂರಿಯಾಗಿ ಆಯ್ತು. ಈದ್ ಮಿಲಾದ್ ಮೆರವಣಿಗೆ ಕೂಡ ಚೆನ್ನಾಗಿ ಆಯ್ತು. ಆದರೆ, ಕೊನೆಯಲ್ಲಿ ಕೆಲವರಿಂದ ಅಶಾಂತಿ ಉಂಟಾಗಿದೆ. ಗಲಭೆ ಹಿನ್ನೆಲೆಯಲ್ಲಿ 24 ಎಫ್ ಐಆರ್ ಆಗಿದೆ, 60 ಮಂದಿಯನ್ನು ಬಂಧಿಸಲಾಗಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ನಾನು ಕಾನೂನಿನ ಪರ ನಿಲ್ಲುವವನು, ಯಾರು ಗಲಭೆ ಶುರು ಮಾಡಿದ್ದಾರೆ, ಅದರ ಭಾಗಿವಾಗಿದ್ದಾರೆ, ಯಾರನ್ನೂ ಬಿಡುವುದಿಲ್ಲ. ಈಗಾಗಲೇ ಅಧಿಕಾರಿಗಳಿಗೆ ಹೇಳಿದ್ದೇನೆ. ಜನರಿಗೂ ಶಾಂತಿ ಕಾಪಾಡಲು ಮನವಿ ಮಾಡುತ್ತೇನೆ.
ತಲವಾರ್ ಝಳಪಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಸಂಪ್ರದಾಯದಲ್ಲಿ ನಾವು ಹೇಗೆ ತ್ರಿಶೂಲ ಹಿಡಿಯುತ್ತೇವೋ ಅದೇ ರೀತಿ ಅವರು ತಲ್ವಾರ್ ಹಿಡಿದಿದ್ದಾರೆ. ಪ್ಲಾಸ್ಟಿಕ್ ನಲ್ಲಿ ಮಾಡಿದ ಆಯುಧ ಹಿಡಿದಿದ್ದಾರೆ. ಅದರಿಂದ ಯಾವುದೇ ಅನಾಹುತವಾಗಿಲ್ಲ. ಅವರು ಕಲ್ಲು, ಕೋಲು, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆಯೇ ಹೊರತು ಎಲ್ಲೂ ತಲ್ವಾರ್, ಖಡ್ಗದಿಂದ ಯಾರ ಮೇಲೂ ದಾಳಿಯಾಗಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ ನೀಡಿದ್ಧಾರೆ.


