ಅಮೃತಸರ: ಪಂಜಾಬ್ ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ ಗೆ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿ, ದೇವರ ದರ್ಶನ ಪಡೆದ ಬಳಿಕ ರಾಹುಲ್ ಗಾಂಧಿಯವರು ಕರಸೇವೆಯಲ್ಲಿ ತೊಡಗಿಕೊಂಡರು. ಬಳಿಕ ಕಾಂಗ್ರೆಸ್ ಸದಸ್ಯರು ಹಾಗೂ ಗುರುದ್ವಾರದ ಸ್ವಯಂಸೇವಕರ ಜೊತೆ ತಾವೂ ಪಾತ್ರೆ ತೊಳೆದರು. ಈ ವೇಳೆ ರಾಹುಲ್ ಗಾಂಧಿ ಅವರು ತಲೆಗೆ ನೀಲಿ ಬಣ್ಣದ ಕರವಸ್ತ್ರ ಸುತ್ತಿದ್ದಾರೆ.
ರಾಹುಲ್ ಗಾಂಧಿಯವರು ಇಂದು ರಾತ್ರಿ ನಗರದಲ್ಲಿಯೇ ಉಳಿದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ. ಇದು ಅವರ ಖಾಸಗಿ ಭೇಟಿಯಾಗಿದೆ. ಹೀಗಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿಗೆ ಅವಕಾಶ ನೀಡಿರಲಿಲ್ಲ.
ಕಾಂಗ್ರೆಸ್ ಮತ್ತು ಆಡಳಿತಾರೂಢ ಆಮ್ ಆದ್ಮಿ ಪಕ್ಷ ನಡುವಿನ ಉದ್ವಿಗ್ನತೆಯ ನಡುವೆ ರಾಹುಲ್ ಗಾಂಧಿ ಅವರ ಅಮೃತಸರ ಭೇಟಿ ಕುತೂಹಲ ಹುಟ್ಟು ಮಾಡಿದೆ.


