ತುರುವೇಕೆರೆ: ತಾಲ್ಲೂಕಿನ ಲಕ್ಕಸಂದ್ರ ಗ್ರಾಮದ ಶಿವಗಂಗಮ್ಮ ಎಂಬ ವಯೋವೃದ್ದೆ ತನ್ನ ಗಂಡನ ಮರಣದ ನಂತರ ತನ್ನ ಗಂಡನ ಪಿತ್ರಾರ್ಜಿತ ಜಮೀನನ್ನು ಖಾತೆ ಮಾಡಿಸಲು ತಹೀಶೀಲ್ದಾರ್ ಕಚೇರಿಗೆ ತೆರಳಿದಾಗ ತನ್ನ ಅರಿವಿಗೆ ಬಾರದೆ ತನ್ನ ಗಂಡ ಜಮೀನನ್ನು ಬೇರೊಬ್ಬರ ಹೆಸರಿಗೆ ತಾನು ತೀರಿ ಹೋಗುವ ಮುನ್ನ ಮರಣ ಸಮರ್ಥನಾ ಪತ್ರ ಮಾಡುವ ಮೂಲಕ ಜಮೀನನ್ನು ಚರಿತ ಎಂಬುವವರ ಹೆಸರಿಗೆ ಬರೆದದ್ದು ತಿಳಿದು ದಿಕ್ಕು ತೋಚದಂತಾಗಿ ಕೊನೆಗೆ ತನ್ನ ತಂಗಿ ಮಕ್ಕಳ ಸಹಾಯದಿಂದ ಕೋರ್ಟ್ ಮೆಟ್ಟಿಲೇರಿರುವ ಈಕೆ ಕೋರ್ಟ್ ಮೂಲಕ ಖಾತೆ ಬದಲಾವಣೆ ಮಾಡದಂತೆ ಸ್ಟೇ ಆರ್ಡರ್ ಪಡೆದಿದ್ದು ತಹಶಿಲ್ದಾರ್ ಎದುರು ಕೋರ್ಟ್ ದಾಖಲೆಯನ್ನಿಡಿದು ಖಾತೆ ಬದಲಾವಣೆ ಮಾಡದಂತೆ ಗಳಗಳನೆ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಶಿವಗಂಗಮ್ಮ, ಈ ಜಮೀನು ನಮಗೆ ಪಿತ್ರಾರ್ಜಿತ ಆಸ್ಥಿಯಾಗಿದ್ದು ನನ್ನ ಗಂಡನನ್ನು ಪುಸಲಾಯಿಸಿ ಮರಣ ಸಮರ್ಥನಾ ಪತ್ರ ಬರೆಹಿಸಿಕೊಂಡಿದ್ದಾರೆ. ಎಲ್ಲಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ಹೊಡೆಯುವ ಹುನ್ನಾರ ಮಾಡಿದ್ದಾರೆ. ನನಗೆ ಇರುವ ಈ ಒಂದು ಜೀವನದ ಆಸರೆಯನ್ನು ಕದಿಯುವ ಪ್ರಯತ್ನ ಮಾಡಿರುವುದು ಎಷ್ಟು ಸರಿ ಎಂದು ಅವಲತ್ತುಕೊಂಡರು.
ಶಿವಗಂಗಮ್ಮನ ತಂಗಿ ಮಗ ಮಂಜುನಾಥ್ ಮಾತನಾಡಿ, ನಮ್ಮ ದೊಡ್ಡಪ್ಪನ ಜಮೀನನ್ನು ನಮ್ಮಗಳ ಅರಿವಿಗೆ ಬಾರದಂತೆ ಅಕ್ರಮ ಖಾತೆ ಮಾಡಲು ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಪಿತ್ರಾರ್ಜಿತ ಆಸ್ಥಿಯನ್ನು ವಿಲ್ ಮಾಡಲು ಹೇಗೆ ಸಾಧ್ಯ? ವಾರಸುದಾರರೇ ಇಲ್ಲವೆಂದು ಕೋರ್ಟಿಗೆ ಸುಳ್ಳು ಹೇಳಿರುವ ಚರಿತ ಎಂಬುವರು ಅಕ್ರಮವಾಗಿ ಜಮೀನನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ