ಕೊಡಿಗೇನಹಳ್ಳಿ: ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಬ್ಯಾಲ್ಯ ಗ್ರಾಮ ಪಂಚಾಯಿತಿಯಲ್ಲಿ ರೂ. 25 ಲಕ್ಷದಷ್ಟು ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪ್ರಭಾವಿ ಮುಖಂಡರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ದೂರಲಾಗಿದೆ.
ಗ್ರಾಮ ಪಂಚಾಯಿತಿಯ ಸದಸ್ಯರಾದ ಅರುಣ್ ಕುಮಾರ್, ಯೋಗೀಶ್, ಬಿ.ಎಸ್. ಶಾರದಮ್ಮ ಮತ್ತು ಎಂ.ಎನ್. ರಾಧಮ್ಮ ಅವರು ಈ ಬಗ್ಗೆ ಆರೋಪಿಸಿದ್ದು, ಪಂಚಾಯಿತಿ ಆಡಳಿತ ಅಧಿಕಾರಕ್ಕೆ ಬಂದು 10 ತಿಂಗಳಾಗಿದ್ದರೂ ಇಲ್ಲಿಯವರೆಗೆ 10 ಸಾಮಾನ್ಯ ಸಭೆಗಳನ್ನು ಕರೆಯಬೇಕಾಗಿತ್ತು. ಕೇವಲ 3 ಸಭೆಗಳನ್ನು ಮಾತ್ರ ನಡೆಸಲಾಗಿದೆ. ಈ ಹಿಂದಿನ ಅವಧಿಯ ಬಿಲ್ ಗಳು ಬಾಕಿಯಿವೆ ಎಂದು ತೋರಿಸಿ ವಿವಿಧ ಏಜೆನ್ಸಿಗಳಿಗೆ ರೂ. 28 ಲಕ್ಷ ಡ್ರಾ ಮಾಡಿ ಕೊಡಲಾಗಿದೆ ಎಂದಿದ್ದಾರೆ.
ಈ ಎಲ್ಲಾ ಬಿಲ್ ಗಳನ್ನು ಪಾವತಿಸಲು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಿಲ್ಲ. ಹಾಗೆಯೇ ಹಿಂದಿನ ಪಿಡಿಒ ಹಳೇ ಬಿಲ್ ಗಳು ಬಾಕಿಯಿವೆ ಎಂದು ಎಲ್ಲಿಯೂ ನಮೂದಿಸಿರುವುದಿಲ್ಲ ಎಂದು ಹೇಳಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಒಂದು ದಿನದಲ್ಲಿ ರೂ.20 ಸಾವಿರ ಮಾತ್ರ ಖರ್ಚು ಮಾಡಲು ಅಧಿಕಾರವಿದೆ. ಆದರೆ ನಿಯಮ ಮೀರಿ ಹಲವು ಏಜೆನ್ಸಿ ಮತ್ತು ಖಾಸಗಿ ವ್ಯಕ್ತಿಗಳಿಗೆ ಲಕ್ಷಾಂತರ ರೂಪಾಯಿಯನ್ನು ಒಂದೇ ದಿನದಲ್ಲಿ ಪಾವತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ಸದಸ್ಯರು ಅಕ್ಟೋಬರ್‌ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ಕೇಳಿದ್ದರೂ ಪಿಡಿಒ ಇದುವರೆಗೂ ಮಾಹಿತಿ ನೀಡಿಲ್ಲ. ಈ ದೂರುಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ದೊರೆಕಿಸಿ ಕೊಡಲು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ದೂರು ನೀಡಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700