ತುಮಕೂರು: ಎಲ್ಲಿ ನೋಡಿದರಲ್ಲಿ ಬೂದು ಕುಂಬಳಕಾಯಿ ರಾಶಿಗಳು. ಫುಟ್ಪಾತ್ ಗಳಲ್ಲಿ, ರಸ್ತೆಗಳಲ್ಲಿ ಗ್ರಂಥಾಲಯದ ಮುಂಭಾಗದಲ್ಲಿ, ಸಾರ್ವಜನಿಕ ಶೌಚಾಲಯಗಳ ಮುಂಭಾಗದಲ್ಲಿ ರಾಶಿ ರಾಶಿ ಬೂದುಗುಂಬಳಗಾಯಿ ಅಚ್ಚರಿ ಸೃಷ್ಟಿಸಿತು.
ರಸ್ತೆ ಬದಿಯಲ್ಲಿ ರಾಶಿರಾಶಿಯಾಗಿ ಬೂದುಗುಂಬಳಕಾಯಿ ಯಾಕೆ ಸುರಿಯಲಾಗಿದೆ ಎನ್ನುವುದು ಗೊತ್ತಿಲ್ಲ, ಸಾರ್ವಜನಿಕರಂತೂ ಈ ದೃಶ್ಯ ಕಂಡು ಅಚ್ಚರಿಗೊಳಗಾಗಿದ್ದಾರೆ. ತುಮಕೂರು ನಗರದ ಹೃದಯ ಭಾಗವಾದ ಸಿರಾ ಗೇಟ್ ಬಳಿ ಮತ್ತು ಸಾರ್ವಜನಿಕ ಗ್ರಂಥಾಲಯ ಹಾಗೂ ಸಾರ್ವಜನಿಕ ಶೌಚಾಲಯದ ಬಳಿ ಹೀಗೆ ಬೂದು ಕುಂಬಳಕಾಯಿ ಬಿದ್ದಿರುವುದು ಕಂಡು ಬಂತು.
ಸಿರಾ ಗೇಟ್ ನಿಂದ ತುಮಕೂರು ಮಾರುಕಟ್ಟೆ ವರೆಗೂ ಇದೇ ರೀತಿ ರಸ್ತೆಗೆ ಮತ್ತು ಚರಂಡಿಗೆ ಬೂದುಗುಂಬಳಕಾಯಿ ಸುರಿಯಲಾಗಿದೆ. ಹಬ್ಬದ ಪ್ರಯುಕ್ತ ರಾಶಿ ರಾಶಿ ಬೂದುಗುಂಬಳಕಾಯಿ ತರಲಾಗಿದ್ದು, ಆದ್ರೆ ವ್ಯಾಪಾರವಿಲ್ಲದೇ ಇಲ್ಲಿಯೇ ಸುರಿದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ರಸ್ತೆ ಬದಿಯಲ್ಲಿ ಸುರಿಯಲಾಗಿರುವ ಬೂದುಗುಂಬಳಕಾಯಿ ಕೊಳೆತರೆ ನಗರದ ಸ್ಥಿತಿ ಏನಾಗಬಹುದು ಎನ್ನುವ ಮಾತುಗಳು ಕೂಡ ಕೇಳಿ ಬಂದವು. ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ರಾಶಿರಾಶಿ ಬೂದುಗುಂಬಳಕಾಯಿ ಸುರಿಯಲಾಗಿದ್ದರೂ, ಅದನ್ನು ತೆರವುಗೊಳಿಸುವ ಪ್ರಯತ್ನಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ.