ಚಾಮರಾಜನಗರ: ಪ್ರಮುಖ ಯಾತ್ರಸ್ಥಳವಾದ ಚಾಮರಾಜನಗರದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರದಿಂದ ದೀಪಾವಳಿ ಜಾತ್ರೆ ಆರಂಭಗೊಳ್ಳಲಿದ್ದು ಸಹಸ್ರಾರು ಮಂದಿ ಪಾದಯಾತ್ರೆ ಮೂಲಕ ಬೆಟ್ಟಕ್ಕೆ ತೆರಳುತ್ತಿದ್ದಾರೆ.
ಚಾಮರಾಜನಗರ, ನಂಜನಗೂಡು, ಮಂಡ್ಯ ಸೇರಿದಂತೆ ಹತ್ತಾರು ಜಿಲ್ಲೆಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ನೂರಾರು ಕಿಮೀ ಪಾದಯಾತ್ರೆ ಮೂಲಕ ಭಕ್ತರು ಬರುತ್ತಿದ್ದು ಬೆಟ್ಟದಲ್ಲಿ ಭಕ್ತ ಸಾಗರ ಸೇರಿದೆ. ಶುಕ್ರವಾರದಿಂದ ದೀಪಾವಳಿ ಜಾತ್ರೆ ಆರಂಭವಾಗಲಿದ್ದು 14 ರ ಮಂಗಳವಾರದಂದು ಬೆಳಗ್ಗೆ 8.50ಕ್ಕೆ ರಥೋತ್ಸವ ನಡೆಯಲಿದೆ.
ಇನ್ನು, ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಹನೂರಿನಲ್ಲಿ ಮಹಿಳಾ ಭಕ್ತರು ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಾ ತೆರಳುವ ಮೂಲಕ ಗಮನ ಸೆಳೆದಿದ್ದಾರೆ. ನಡೆದು ಹೋಗುವುದೇ ಕಷ್ಟ ಎಂಬ ಸ್ಥಿತಿಯಲ್ಲಿ ಮಹಿಳಾ ಭಕ್ತರು ಕುಣಿದು ಕುಪ್ಪಳಿಸಿ ಮಹದೇಶ್ವರನಿಗೆ ಘೋಷಣೆ ಕೂಗುತ್ತಾ ತೆರಳುವ ಮೂಲಕ ಭಕ್ತಿ ಪರಾಕಷ್ಟೆ ಮೆರೆದಿದ್ದಾರೆ.


