ಕೊರಟಗೆರೆ: ಮದುವೆಗೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಪೊಲೀಸ್ ಪೇದೆ ಹಾಗೂ ಅವರ ಸ್ನೇಹಿತ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟ ಮಾರ್ಗದಲ್ಲಿ ನಡೆದಿದೆ.
ಕೊಡಿಗೆನಹಳ್ಳಿ ಪೊಲೀಸ್ ಠಾಣೆಯ ಮುಖ್ಯಪೇದೆ ಮಹೇಶ್ (27) ಹಾಗೂ ಚಂದ್ರಯ್ಯ (35) ಮೃತಪಟ್ಟವರಾಗಿದ್ದಾರೆ. ಘಟನೆಯಲ್ಲಿ ಭರತ್ (22) ಎಂಬವರು ಗಾಯಗೊಂಡಿದ್ದು, ಅವರನ್ನು ತುಮಕೂರಿನ ಆದಿತ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಸಿಲುಕಿದವರೆಲ್ಲರೂ ಮಧುಗಿರಿ ತಾಲೂಕಿನ ಗರಣಿ ಗ್ರಾಮದ ಯುವಕರಾಗಿದ್ದಾರೆ.
ಸ್ನೇಹಿತನ ಮದುವೆ ಮುಗಿಸಿ, ಸಿದ್ಧರಬೇಟ್ಟದಿಂದ ಕೊರಟಗೆರೆಗೆ ಬರುವ ಮಾರ್ಗದ ಅರಣ್ಯ ಇಲಾಖೆಯ ನರ್ಸರಿಯ ಸಮೀಪದ ರಸ್ತೆಯ ತಿರುವಿನಲ್ಲಿ ಬೈಕ್ ಆಯಾ ತಪ್ಪಿ ಬಿದ್ದಿದ್ದು, ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ಮಧುಗಿರಿ ಡಿವೈಎಸ್ಪಿ, ಕೊರಟಗೆರೆ ಸಿಪಿಐ, ಪಿಎಸೈ ಭೇಟಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.ಕೊರಟಗೆರೆ


