- ನೂತನ ಜಿಲ್ಲಾಧಿಕಾರಿಗಳಾಗಿ ಶುಭ ಕಲ್ಯಾಣ್ ಅಧಿಕಾರ ಸ್ವೀಕಾರ
ತುಮಕೂರು ಜಿಲ್ಲೆಯಲ್ಲಿ ಹಲವು ವಿವಾದಗಳಿಗೆ ಕಾರಣವಾಗಿದ್ದ ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇದೀಗ ತುಮಕೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಶುಭ ಕಲ್ಯಾಣ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಕಳೆದ ಸುಮಾರು 6 ತಿಂಗಳ ಹಿಂದೆ ತುಮಕೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ, ಶ್ರೀನಿವಾಸ್ ಕೆ. ಇವರು, ಈ ಹಿಂದೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಇನ್ನಿತರೆ ಭಾಗದಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಬೆಂಗಳೂರು ನಗರದ ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ, ವಿಧಾನ ಸಭಾ ಚುನಾವಣೆಗೂ ಮುನ್ನ, ಮತದಾರರ ಮಾಹಿತಿ ಸಂಗ್ರಹಿಸಿದ ಸಂಸ್ಥೆಗೆ ನೆರವು ನೀಡಿದ ಆರೋಪದ ಮೇಲೆ ಚುನಾವಣಾ ಆಯೋಗದ ನಿರ್ದೇಶನದಂತೆ ಅಮಾನತು ಮಾಡಲಾಗಿತ್ತು.
ತದ ನಂತರದಲ್ಲಿ, ತುಮಕೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಮಧ್ಯೆ ಕಳೆದ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಆಚರಿಸುವ ನೆಪದಲ್ಲಿ ನಗರದ ಹೊರವಲಯದ ಗೆದ್ದಲಹಳ್ಳಿ ರಸ್ತೆಯಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಹಾಸ್ಟೆಲ್ ನಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ಸಿನಿಮಾದ ಅಶ್ಲೀಲ ಹಾಡುಗಳಿಗೆ ಡಾನ್ಸ್ ಮಾಡಲಾಗಿದೆ ಎಂಬ ವಿಷಯವು ಕೆಲವು ಪತ್ರಿಕೆ, ಮುದ್ರಣ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ರಾಜ್ಯದ ನೈಜ ಹೋರಾಟಗಾರರ ವೇದಿಕೆಯವರು ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯಕಾರ್ಯದರ್ಶಿಗಳು, ಕಂದಾಯ ಮಂತ್ರಿಗಳು, ಡಿಪಿಎಆರ್, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ರಾಜ್ಯ ಮಕ್ಕಳ ರಕ್ಷಣಾ ಆಯೋಗದಲ್ಲಿ ದೂರು ನೀಡಿದ್ದರು. ಹಾಗೂ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೂಡ ದೂರು ನೀಡಲಾಗಿತ್ತು.
ಅಲ್ಲದೇ, ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಈ ಬಗ್ಗೆ ಸುಮೋಟೋ ಕೇಸು( ಕೇಸ್ ನಂಬರ್: 103/2023) ದಾಖಲಿಸಿಕೊಳ್ಳುವುದರೊಂದಿಗೆ ತನಿಖೆ ಮತ್ತು ವಿಚಾರಣೆ ನಡೆಸಲು ತ್ರಿಸದಸ್ಯತ್ವ ತನಿಖಾ ಸಮಿತಿಯನ್ನು ನೇಮಿಸಲಾಗಿತ್ತು. ಹಾಗೂ ದಿನಾಂಕ: 15-12-2023ರಂದು ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯಲ್ಲಿ ಸಾಮಾಜಿಕ ಹೋರಾಟಗಾರರಾದ ಹಂದ್ರಾಳ್ ನಾಗಭೂಷಣ್ ಅವರ ತಂಡವು ದೂರನ್ನು ಕೂಡ ದಾಖಲಿಸಲಾಗಿದೆ.
ಈ ಎಲ್ಲ ವಿದ್ಯಮಾನಗಳ ಮೇರೆಗೆ ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ. ಇವರನ್ನು ಸರ್ಕಾರವು ವರ್ಗಾವಣೆ ಮಾಡಿ, ಆದೇಶ ಹೊರಡಿಸಲಾಗಿದೆ. ಪ್ರಸ್ತುತ ಈ ಹಿಂದೆ ತುಮಕೂರು ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿದ್ದ ಶುಭಕಲ್ಯಾಣ್ ಐಎಎಸ್ ಇವರನ್ನು ತುಮಕೂರು ಜಿಲ್ಲಾಧಿಕಾರಿಯಾಗಿ ಸರ್ಕಾರವು ನೇಮಿಸಿದ್ದು, ನೂತನ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಯಾವ ರೀತಿ ಕೆಲಸ ಮಾಡುತ್ತಾರೆಂದು ಜನರು ನಿರೀಕ್ಷೆಯಲ್ಲಿದ್ದಾರೆ.
ತುಮಕೂರು ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದ ಶುಭ ಕಲ್ಯಾಣ್:
ನೂತನ ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್ 2014ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದಾರೆ. ಇಂಜಿನಿಯರಿಂಗ್ ಪದವಿಧರೆ ಆಗಿರುವ ಇವರು, ಈ ಹಿಂದೆ 2020ರ ಜನವರಿಯಿಂದ ಎರಡು ವರ್ಷಗಳ ಕಾಲ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕಾರ್ಯ ನಿರ್ವಹಿಸಿದ್ದರು.
ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಈ ಆಡಳಿತ ವಿಭಾಗದಲ್ಲಿ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಇವರು ಕೆಲಸ ಮಾಡುತ್ತಿದ್ದರು.
ಇಂದು ಸಹಕಾರ ಸಚಿವ ರಾಜಣ್ಣ ಅವರು ನೂತನ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.