ಹೆಚ್.ಡಿ.ಕೋಟೆ: ತಾಲೂಕಿನ ಕಂಚಮ್ಮಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಮಲೆಯಾಳದಮ್ಮ ಶ್ರೀ ಜಗನ್ಮಾತೆ ಭದ್ರಮಹಾಕಾಳಿ ಅಮ್ಮ ದೇವಿಯವರ ಪ್ರತಿಷ್ಠಾಪನಾ ಮಹೋತ್ಸವ ದೇವಸ್ಥಾನದ ಗುಡ್ಡಪ್ಪ ಕುಮಾರಸ್ವಾಮಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಹೆಚ್.ಡಿ.ಕೋಟೆ ತಾಲೂಕಿನ ಕಂಚಮ್ಮಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಗೊಂಡಿರುವ ಶ್ರೀ ಆದಿಶಕ್ತಿ ಮಲೆಯಾಳದಮ್ಮ ಶ್ರೀ ಜಗನ್ಮಾತೆ ಭದ್ರಮಹಾಕಾಳಿ ಅಮ್ಮ ದೇವಿಯವರ ಸ್ಥಿರ ಮೂರ್ತಿಗಳ ಅಷ್ಟಬಂಧನ ಪ್ರತಿಷ್ಠಾಪನಾ ಮಹೋತ್ಸವ ಶನೇಶ್ವರಸ್ವಾಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ದೇವಸ್ಥಾನದ ಗುಡ್ಡಪ್ಪ ಕುಮಾರಸ್ವಾಮಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.
ಮಹೋತ್ಸವದ ಅಂಗವಾಗಿ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಬಳಿದು ನಾನಾ ಬಗೆಯ ಹೂವುಗಳಿಂದ ಸಿಂಗಾರಿಸಲಾಗಿತ್ತು. ದೇವಸ್ಥಾನದ ದ್ವಾರಗೋಪುರದ ಬಳಿ ತಳಿರು-ತೋರಣಗಳಿಂದ ಮಧುವಣಗಿತ್ತಿಯಂತೆ ಅಲಂಕೃತಗೊಳಿಸಲಾಗಿತ್ತು. ಮುಂಜಾನೆಯೇ ಬ್ರಾಹ್ಮಿ ಮುಹೂರ್ತದಲ್ಲಿ ಅಮ್ಮನವರ ಸ್ಥಿರ ಮೂರ್ತಿಗಳ ಅಷ್ಠ ಬಂಧನ ಪ್ರಾಣ ಪ್ರತಿಷ್ಠಾಪಿಸಲಾಯಿತು.
ನಂತರ ಗ್ರಾಮದ ಪ್ರಮುಖ ಬೀದಿಯಿಂದ ಅಮ್ಮನವರ ಕಳಶದೊಂದಿಗೆ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನ ಬಳಿಗೆ ಕರೆತರಲಾಯಿತು. ಮಂಗಳವಾದ್ಯಗಳು ಮೊಳಗಿದವು. ರಾಜು ಮತ್ತು ತಂಡದಿಂದ ವೀರಗಾಸೆ ನೃತ್ಯ ಪ್ರದರ್ಶಿಸಲಾಯಿತು. ಇದಲ್ಲದೆ ಡೊಳ್ಳು ಕುಣಿತ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೀಯವಾಗಿತ್ತು. ದಾರಿಯುದ್ದಕ್ಕೂ ಭಕ್ತರು ದೇವಿಯ ನಾಮಸ್ಮರಣೆ ಮಾಡಿದರು. ಜಾನಪದ ಗೀತೆಗಳನ್ನು ಹಾಡಿದರು. ಜಯಘೋಷ ಕೂಗಿದರು.
ಬಳಿಕ ದೇವತೆಗಳಿಗೆ ಮಹಾ ಪೂರ್ಣಾಹುತಿ ಮತ್ತು ಮಹಾಮಂಗಳಾರತಿ, ಜಿಯಾದಿಹೋಮ, ಮಹಾಕುಂಭಾಭಿಷೇಕ, ಮಹಾನೈವೇದ್ಯ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಭಕ್ತರು ಹರಕೆ ತೀರಿಸಿದರು. ಜತೆಗೆ ಕುದುರೆಸ್ವಾಮಿಗೂ ಪೂಜೆ ನಡೆಸಲಾಯಿತು. ಅನ್ನ ಸಂತರ್ಪಣೆ ನಡೆಯಿತು. ದೇವಿಯ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರಿಗೆ ರವಿಕೆ, ಬಳೆ, ಆರಿಶಿಣ, ಕುಂಕುಮ ಹಾಗೂ ಹೂವು ನೀಡಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700