ಬೀದರ್: ಜಿಲ್ಲೆಯ ನೂತನ ನಗರ ಪೊಲೀಸರು ಒಂದು ಕೋಟಿಗೂ ಅಧಿಕ ಮೌಲ್ಯದ ವಿವಿಧ ನಮೂನೆಯ ಅಕ್ರಮ ಪಾನ್ ಮಸಾಲ ಇತರೆ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ.
ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ನೂತನ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೊಳ್ಳಾರ-ಕೆ ಕೈಗಾರಿಕಾ ಪ್ರದೇಶದ ಗೋದಾಮಿನಲ್ಲಿ, ಸರ್ಕಾರದ ಅಥವಾ ಸಂಬಂಧಿಸಿದ ಕಂಪೆನಿಯವರ ಪರವಾನಿಗೆ ಇಲ್ಲದೇ, ಮೂಲ ಕಂಪನಿಯವರ ಹೆಸರನ್ನು ಬಳಸಿಕೊಂಡು ಅಕ್ರಮವಾಗಿ ಪಾನ್ ಮಸಾಲಾ, ಜರ್ದಾಗಳಲ್ಲಿ (ಗುಟಕಾ) ವಿಷಪೂರಿತ ಪದಾರ್ಥಗಳಿಂದ ಕಲಬೆರಕೆ ಮಾಡಿ ತಯಾರಿಸಿ, ಪ್ಯಾಕ್ ಮಾಡಿ ಸಂಗ್ರಹಿಸಿಟ್ಟಿರುವ ಬಗ್ಗೆ ನಿಖರ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ, ಪಾನ್ ಮಸಾಲಾ ಇತರೆ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.
ಬೀದರ ಉಪ-ವಿಭಾಗ ಡಿ.ಎಸ್ಪಿ ಶಿವನಗೌಡ ಪಾಟೀಲ್ ರವರ ಮಾರ್ಗದರ್ಶದಲ್ಲಿ ನೂತನ ನಗರ ಪೊಲೀಸ್ ಠಾಣೆಯ ಪ್ರಭಾರಿ ಪಿ.ಐ. ವಿಜಯಕುಮಾರ, ತಸ್ಮೀಮ್ ಸುಲ್ತಾನಾ, ಪಿ.ಎಸ್.ಐ. ಬಸವರಾಜ, ಎ.ಎಸ್.ಐ. ವಿಜಯಕುಮಾರ, ಧನರಾಜ, ರಾಮಣ್ಣಾ, ಪ್ರವೀಣಕುಮಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ದಾಳಿ ವೇಳೆ ಪಾನ್ ಮಸಾಲಾ ಪ್ಯಾಕಿಂಗ್ ಮಾಡುವ ಯಂತ್ರಗಳು, ವಿವಿಧ ನಮೂನೆಯ ಪಾನ ಮಸಾಲಾ, ಜರ್ದಾ ತಯಾರಿಸುವ ಕಚ್ಚಾ ಮೆಟಿರಿಯಲ್, ಹಾಗೂ ಇತರೆ ಪದಾರ್ಥಗಳು ಹೀಗೆ ಒಟ್ಟು, 10,251,500 ರೂ. ಬೆಲೆ ಬಾಳುವ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವರದಿ: ಅರವಿಂದ್ ಮಲ್ಲಿಗೆ, ಬೀದರ್


