ನವದೆಹಲಿ: ದೆಹಲಿಯ ಏರೋಸಿಟಿಯಲ್ಲಿರುವ ಪಂಚತಾರಾ ಹೋಟೆಲ್ ಗೆ ನಕಲಿ ಯುಪಿಐ ಪಾವತಿ ಮಾಡುವ ಮೂಲಕ, 5 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಲು ಯತ್ನಿಸಿದ ಆರೋಪಿ ಮಹಿಳೆಯನ್ನು ದೆಹಲಿ ಪೋಲಿಸರು ಬಂಧಿಸಿದ್ದಾರೆ.
ಮಹಿಳೆಯು ಡಿಸೆಂಬರ್ 30 ರಂದು ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಬಳಿಇರುವ ಹೋಟೆಲ್ ಗೆ ಭೇಟಿ ನೀಡಿ 15 ದಿನಗಳ ಕಾಲ ಅಲ್ಲಿಯೇ ತಂಗಿ ಹೋಟೆಲ್ ಗೆ ನಕಲಿ ಪಾವತಿ ಮಾಡಿದ್ದರು. ಇದರಿಂದ ಸಂಶಯಗೊಂಡ ಹೋಟೆಲ್ ಸಿಬ್ಬಂದಿಯು ಮಹಿಳೆಯನ್ನು ನಕಲಿ ಪಾವತಿ ಬಗ್ಗೆ ವಿಚಾರಿಸಿದಾಗ ಆಕೆ ಗಲಾಟೆ ಮಾಡಿದ್ದಾಳೆ ಎನ್ನಲಾಗಿದೆ. ಪಂಚತಾರಾ ಹೋಟೆಲ್ ನಲ್ಲಿ 15 ದಿನಗಳ ವಾಸ್ತವ್ಯದ ವೇಳೆ ಮಹಿಳೆ 2.11 ಲಕ್ಷ ರೂ. ಸ್ಪಾ ಬಿಲ್ ಮತ್ತು ರೂ. 5.80 ಲಕ್ಷ ಹೋಟೆಲ್ ಬಿಲ್ ಸೇರಿದಂತೆ 7 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ.
ಮಹಿಳೆ ಯುಪಿಐ ಬಳಸಿ ಬಿಲ್ ಪಾವತಿಸಿದ್ದಾಳೆ ಆದರೆ ಹೋಟೆಲ್ ನ ಖಾತೆಯು ಹಣವನ್ನು ಸ್ವೀಕರಿಸಿರುವುದಿಲ್ಲ. ಇದರಿಂದಾಗಿ ಅನುಮಾನಗೊಂಡ ಹೋಟೆಲ್ ಮಾಲಿಕ ಮಹಿಳೆ ವಿರುದ್ಧ ದೂರು ನೀಡಿದ್ದಾರೆ.
ನಂತರ ಘಟನೆ ಕುರಿತು ಮಾಹಿತಿ ಪಡೆದ ಐಜಿಐ ಪೊಲೀಸರ ತಂಡ ಹೋಟೆಲ್ಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ವಿಚಾರಣೆಯಿಂದ ಮೇಲ್ನೋಟಕ್ಕೆ ಅಪರಾಧ ಬಯಲಾಗಿದೆ ಎಂದು ತಿಳಿದುಬಂದಿದೆ. ಹೋಟೆಲ್ ಮಾಲೀಕರ ದೂರಿನ ಆಧಾರದ ಮೇಲೆ ಜನವರಿ 13 ರಂದು ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿ ಆಕೆಯನ್ನು ಬಂಧಿಸಲಾಗಿತ್ತು. ಬಳಿಕ ಆರೋಪಿ ಮಹಿಳೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತ್ತು ಎನ್ನಲಾಗಿದೆ.


