ರಾಮಕ್ಷೇತ್ರ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೂ ಮುನ್ನ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) 3 ಜನರನ್ನು ಬಂಧಿಸಿದೆ. ನಿನ್ನೆ ಅಯೋಧ್ಯೆ ಜಿಲ್ಲೆಯಲ್ಲಿ ನಡೆಸಿದ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಗೆ ಭಯೋತ್ಪಾದಕ ಸಂಪರ್ಕವಿದೆ ಎಂದು ಶಂಕಿಸಲಾಗಿದೆ.
ಉತ್ತರ ಪ್ರದೇಶದ ವಿಶೇಷ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ), ಪ್ರಶಾಂತ್ ಕುಮಾರ್ ಅವರು ಅಯೋಧ್ಯೆಯಲ್ಲಿ ನಡೆಸಿದ ಶೋಧದ ವೇಳೆ ರಾಜ್ಯ ಭಯೋತ್ಪಾದನಾ ನಿಗ್ರಹ ದಳವು ಮೂವರು ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ. ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಭಯೋತ್ಪಾದಕ ಸಂಘಟನೆಯೊಂದಿಗೆ ಅವರ ಸಂಪರ್ಕ ಸದ್ಯಕ್ಕೆ ಪತ್ತೆಯಾಗಿಲ್ಲ ಎಂದು ಡಿಜಿಪಿ ಹೇಳಿದ್ದಾರೆ.
ಜನವರಿ 22ರಂದು ನಡೆಯಲಿರುವ ರಾಮಮಂದಿರ ಪ್ರತಿಷ್ಠಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಡ್ರೋನ್ ಗಳ ಮೂಲಕ ಪೊಲೀಸ್ ತಪಾಸಣೆ ಮತ್ತು ಕಣ್ಗಾವಲು ಕೂಡ ತೀವ್ರಗೊಳಿಸಲಾಗಿದೆ. ರಾತ್ರಿ ದೃಷ್ಟಿ ಸಾಧನಗಳು (ಎನ್ ವಿಡಿ) ಮತ್ತು ಸಿಸಿಟಿವಿ ಕ್ಯಾಮೆರಾಗಳಂತಹ ತಂತ್ರಜ್ಞಾನಗಳನ್ನು ಬಳಸಿಕೊಂಡು ಸರ್ಕಾರವು ನಗರದಾದ್ಯಂತ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ.
ಜನವರಿ 22 ರಂದು ನಡೆಯಲಿರುವ ಸಮರ್ಪಣಾ ಸಮಾರಂಭದಲ್ಲಿ ಗಣ್ಯರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಜನರು ಭಾಗವಹಿಸಲಿದ್ದಾರೆ. ಸಿದ್ಧತೆಗಳು ಭರದಿಂದ ಸಾಗಿವೆ.


