ಜೋಧಪುರ: ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ಸಮಯದಲ್ಲಿ ಗೂಡ್ಸ್ ರೈಲಿಗೆ ಸಿಲುಕಿ ಇಬ್ಬರು ಶಾಲಾ ಮಕ್ಕಳು ಮೃತಪಟ್ಟಿರುವ ಘಟನೆ ಇಲ್ಲಿನ ಬನಾರ್ ಪ್ರದೇಶದಲ್ಲಿ ನಡೆದಿದೆ.
ಮೃತ ಮಕ್ಕಳು ಬನಾರ್ ಪ್ರದೇಶದ ಗಣೇಶಪುರ ನಿವಾಸಿಗಳಾಗಿದ್ದುಇವರನ್ನು ಅನನ್ಯ ಕನ್ವರ್ (9) ಮತ್ತು ಯುವರಾಜ್ ಸಿಂಗ್ (11) ಎಂದು ಗುರುತಿಸಲಾಗಿದೆ.ಸೋದರ ಸಂಬಂಧಿಗಳಾದ ಇಬ್ಬರು ಮಕ್ಕಳು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ದಾರಿ ಮಧ್ಯೆ ನಾಯಿಗಳು ಮಕ್ಕಳನ್ನು ಅಟ್ಟಿಸಿಕೊಂಡು ಬಂದಿದ್ದವು.ಇದರಿಂದ ಭಯಭೀತರಾದ ಮಕ್ಕಳು ನಾಯಿಗಳಿಂದ ತಪ್ಪಿಸಿ ಓಡಲು ಪ್ರಾರಂಭಿಸಿದ್ದರು.
ನಾಯಿಯಿಂದ ತಪ್ಪಿಸುವ ಭರದಲ್ಲಿ ಮಕ್ಕಳು ರೈಲು ಬರುವುದನ್ನು ಗಮನಿಸದೆ ರೈಲ್ವೆ ಹಳಿಗಳ ಮೇಲೆ ಪ್ರವೇಶಿಸಿದ್ದಾರೆ,ಇದಾದ ಕೆಲವೇ ಕ್ಷಣಗಳಲ್ಲಿ ಗೂಡ್ಸ್ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮೃತರ ಪೋಷಕರು ಮತ್ತು ಸ್ಥಳೀಯರು ಪ್ರತಿಭಟಿಸಿದ್ದು ನಾಯಿಗಳನ್ನು ಹಿಡಿಯುವವರೆಗೂ ಮೃತದೇಹ ಪಡೆಯುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕೆಲ ಸಮಯದಲ್ಲೇ ಜೋಧಪುರ ನಗರಸಭೆಯ ಶ್ವಾನದಳದ ಸಿಬ್ಬಂದಿ ನಾಯಿಗಳನ್ನು ಹಿಡಿದಿದ್ದಾರೆ. ನಾಯಿ ಮಾಲೀಕರ ವಿರುದ್ಧ ಅಗತ್ಯ ಕ್ರಮ ಜರುಗಿಸುವಂತೆ ಆಗ್ರಹಿಸಿದರು.


