ಸರಗೂರು: ಪಟ್ಟಣದಲ್ಲಿ ಮೂರನೇ ಆಷಾಢ ಶುಕ್ರವಾರದ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮದ ಅಂಗವಾಗಿ ವಾಹನ ಚಾಲಕರ ಸಂಘದ ವತಿಯಿಂದ ತಾಯಿ ಚಾಮುಂಡೇಶ್ವರಿ ಹಾಗೂ ಶ್ರೀ ಚಿಕ್ಕದೇವಮ್ಮ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ವಿಶೇಷ ಪೂಜಾ ಕೈಂಕರ್ಯಗಳನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ದೇವಿಯ ಕೃಪೆಯಿಂದ ಎಲ್ಲ ವಾಹನ ಚಾಲಕರು ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸುವಂತಾಗಲಿ, ಅಪಘಾತಗಳು ನಿಯಂತ್ರಣಕ್ಕೆ ಬರಲಿ ಹಾಗೂ ಸರ್ವರ ಕುಟುಂಬಗಳಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವಾಹನ ಚಾಲಕರ ಸಂಘದ ಅಧ್ಯಕ್ಷ ಬಿರ್ವಾಳ್ ಚಿಕ್ಕಣ್ಣ, “ವಾಹನ ಚಾಲಕರು ಸಮಾಜ ಸೇವೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು, ಪ್ರತಿನಿತ್ಯ ಸಾವಿರಾರು ಜನರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ತಲುಪಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ಸಂಘದ ಸದಸ್ಯರು ಪರಸ್ಪರ ಸಹಕಾರ ಮತ್ತು ಐಕ್ಯತೆಯಿಂದ ಶ್ರಮಿಸಿದರೆ ಸಂಘ ಇನ್ನಷ್ಟು ಬಲಿಷ್ಠವಾಗಲಿದೆ” ಎಂದು ತಿಳಿಸಿದರು.
ಉಚಿತ ಖಾಕಿ ಸಮವಸ್ತ್ರ ವಿತರಣೆ:
ಸಾಮಾಜಿಕ ಸೇವಕ ಹಾಗೂ ದಾನಿ ಮುಳ್ಳೂರು ಮಂಜುನಾಥ್ ಅವರು ಚಾಲಕರಿಗೆ ಖಾಕಿ ಸಮವಸ್ತ್ರಗಳನ್ನು ವಿತರಿಸಿ ಶುಭ ಹಾರೈಸಿದರು. ಬಳಿಕ ಮಾತನಾಡಿದ ಅವರು, “ಸಮಾಜದ ಬೆನ್ನೆಲುಬಾಗಿರುವ ವಾಹನ ಚಾಲಕರ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಈ ಸಮವಸ್ತ್ರ ನೀಡಲಾಗಿದೆ. ಮುಂಬರುವ ದಿನಗಳಲ್ಲೂ ಸಂಘದ ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳಿಗೆ ನಮ್ಮ ಕಡೆಯಿಂದ ನಿರಂತರ ಸಹಕಾರ ಇರಲಿದೆ” ಎಂದು ಭರವಸೆ ನೀಡಿದರು.
ಪೂಜಾ ಕಾರ್ಯಕ್ರಮದ ನಂತರ ಆಗಮಿಸಿದ್ದ ಭಕ್ತಾದಿಗಳಿಗೆ ಹಾಗೂ ಚಾಲಕರಿಗೆ ಭಕ್ತಿಪೂರ್ವಕವಾಗಿ ಪ್ರಸಾದ ವಿತರಿಸಲಾಯಿತು. ಇದೇ ವೇಳೆ ಸಂಘದ ವತಿಯಿಂದ ಚಾಲಕರಲ್ಲಿ ಶಿಸ್ತು, ಸೇವಾ ಮನೋಭಾವ ಹಾಗೂ ಸುರಕ್ಷಿತ ಚಾಲನೆಯ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಚಾಮರಾಜು, ನಾಗರಾಜು, ಲೋಕೇಶ್, ಅಭಿನಂದನ್ (ಆಭಿ), ಜಯೇಂದ್ರ, ಪ್ರಕಾಶ್, ಅರವಿಂದ್, ರವಿ, ಶ್ರೀಕಾಂತ್, ಸತೀಶ್, ನವೀನ್, ಕುಮಾರ್, ರಮೇಶ್, ನಿಂಗಪ್ಪ, ಪಟೇಲ್, ಹರೀಶ್, ನಾಗೇಶ್, ದಿಲೀಪ್, ರಾಜೇಶ್, ವರದರಾಜು, ಗೋಪಾಲ್, ಲೋಕಿ, ಮೋಹನ್, ವೀಜಿ ಹಾಗೂ ದಾನಿಗಳಾದ ಬಾರ್ ಮಾಲೀಕರಾದ ಕರಿಯಪ್ಪ, ಪ್ರೊವಿಷನ್ ಸ್ಟೋರ್ ಮಾಲೀಕ ಕಿಶೋರ್, ಗೋಬಿ ಅಂಗಡಿ ಮಾಲೀಕ ರಂಗಸ್ವಾಮಿ, ಪಾನಿಪುರಿ ವ್ಯಾಪಾರಿ ಚಂದ್ರ, ಬೇಕರಿ ಅಶೋಕ್ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಹಾಗೂ ನೂರಾರು ವಾಹನ ಚಾಲಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
