ಕಲಬುರಗಿ: ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ನಡೆದಿದೆ.
ವಿದ್ಯಾರ್ಥಿನಿ ಕಲಬುರಗಿ ಜಿಲ್ಲೆಯಲ್ಲಿರುವ ವಸತಿ ಶಾಲೆಯೊಂದರಲ್ಲಿ ಓದುತ್ತಿದ್ದಳು. ರಜೆ ಇದ್ದಸಂದರ್ಭದಲ್ಲಿ ಆಕೆ ಮನೆಗೆ ಬರುತ್ತಿದ್ದು ಇದೇ ಸಮಯವನ್ನು ಬಂಡವಾಳ ಮಾಡಿದ್ದ ಸೋದರ ಸಂಬಂಧಿ ಆಕೆಯ ಮೇಲೆ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ.
ಹೀಗೆ ಕಳೆದ ಮಾರ್ಚ್ ನಿಂದ ವಿದ್ಯಾರ್ಥಿನಿ ಹಲವು ಬಾರಿ ಸೋದರ ಸಂಬಂಧಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದಳು. ಅಲ್ಲದೇ ಈ ವಿಚಾರವನ್ನು ಬಾಯಿಬಿಟ್ಟರೆ ಕೊಲೆ ಮಾಡುವ ಬೆದರಿಕೆಯನ್ನು ಕೂಡ ಹಾಕಿದ್ದನು. ಹೀಗಾಗಿ ಆಕೆ ಅತ್ಯಾಚಾರ ವಿಚಾರವನ್ನು ಮುಚ್ಚಿಟ್ಟಿದ್ದಳು ಎನ್ನಲಾಗಿದೆ.
ಡಿಸೆಂಬರ್ 24 ರಂದು ವಿದ್ಯಾರ್ಥಿನಿ ಶಾಲೆಯಲ್ಲಿ ಇದ್ದಾಗ ಆಕೆಗೆ ಜೋರಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದರಿಂದ ಶಿಕ್ಷಕರು ಸಂತ್ರಸ್ತೆಯನ್ನು ಮನೆಗೆ ಕಳುಹಿಸಿದರು. ನಂತರ ಮನೆಯವರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಆಸ್ಪತ್ರಗೆ ದಾಖಲಾದ ನಂತರ ಬಾಲಕಿಯು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಷಯ ತಿಳಿದ ಬಾಲಕಿ ಮನೆಯವರು ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಆರೋಪಿಯನ್ನುಆಳಂದ ಪೊಲೀಸರು ಬಂಧಿಸಿದ್ದಾರೆ.


