ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿರುವ ಕೋಟನೂರ್ ಲುಂಬಿಣಿ ಉದ್ಯಾನದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅಪಮಾನ ಮಾಡಿದ್ದರು. ನಗರದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಘಟನೆಯನ್ನು ಖಂಡಿಸಿ ವಿವಿಧ ದಲಿತಪರ ಸಂಘಟನೆಯ ಕಾರ್ಯಕರ್ತರು ಬೀದಿಗಳಿದು ಭಾರೀ ಪ್ರತಿಭಟನೆ ನಡೆಸಿದ್ದರು. ಘಟನೆ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಸದ್ಯ ಆರೋಪಿಗಳ ಯಾವುದೇ ಮಾಹಿತಿಗಳನ್ನು ಹಂಚಿಕೊಂಡಿಲ್ಲ.
ಸೂಕ್ತ ತನಿಖೆಯ ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಕಲಂ 295 ಐಪಿಸಿ ಹಾಗೂ 3(1)(ಯು)(ವಿ)(ಟಿ) ಎಸ್‌ಸಿ/ಎಸ್ ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


