ತುಮಕೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ.(ಪೋಕ್ಸೋ) 2 ವರ್ಷ 4 ತಿಂಗಳ ಜೈಲು ಶಿಕ್ಷೆ ಹಾಗೂ 15,000 ದಂಡ ವಿಧಿಸಿದೆ.
9 ವರ್ಷ ವಯಸ್ಸಿನ ನೊಂದ ಬಾಲಕಿಗೆ 10—11—2021ರಂದು ಶಾಲೆ ಮುಗಿಸಿ ಮನೆಗೆ ನಡೆದುಕೊಂಡು ಬರುತ್ತಿದ್ದ ವೇಳೆ 45 ವರ್ಷ ವಯಸ್ಸಿನ ಸಯದ್ ನೂರುಲ್ಲಾ ಎಂಬಾತ ಗಾಂಧಿನಗರ ರೈಲ್ವೇ ಟ್ರಾಕ್ ಬಳಿಯಲ್ಲಿ ತಡೆದಿದ್ದು, ಏಕಾಏಕಿ ಬಾಲಕಿಯನ್ನು ಪೊದೆಯೊಳಗೆ ಎಳೆದೊಯ್ದು, ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದು, ನೊಂದ ಬಾಲಕಿ ಕೂಗಿಕೊಂಡಾಗ ಆಕೆಯನ್ನು ಸ್ಥಳೀಯರು ರಕ್ಷಿಸಿದ್ದರು. ಈ ಪ್ರಕರಣದ ತನಿಖಾಧಿಕಾರಿಗಳಾದ ಮಂಗಳಮ್ಮನವರು ಘನ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ.(ಪೋಕ್ಸೋ) ಈ ಪ್ರಕರಣವನ್ನು ವಿಚಾರಣೆ ನಡೆಸಿದ ವೇಳೆ, ವಿಚಾರಣೆ ಮಾಡಿದ ಸಾಕ್ಷಿಗಳಿಂದ ಸೈಯದ್ ನೂರುಲ್ಲ ವಿರುದ್ಧ ಇದ್ದ ಪೋಕ್ಸೋ ಕಾಯ್ದೆಯಡಿಯ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಪರಾಧಿಗೆ 2 ವರ್ಷ 4 ತಿಂಗಳು ಜೈಲು ಹಾಗೂ 15 ಸಾವಿರ ರೂಪಾಯಿ ದಂಡ ವಿಧಿಸಿದೆ. ದಂಡದ ಮೊತ್ತದಲ್ಲಿ ನೊಂದ ಬಾಲಕಿಗೆ ಪರಿಹಾರವಾಗಿ 10 ಸಾವಿರ ರೂಪಾಯಿಗಳನ್ನು ನೀಡಬೇಕು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ತುಮಕೂರು ಇದರಿಂದ 30 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಆದೇಶಿಸಿ ತೀರ್ಪು ನೀಡಿದೆ. ಒಟ್ಟಾರೆಯಾಗಿ 40 ಸಾವಿರ ರೂಪಾಯಿಗಳ ಪರಿಹಾರವನ್ನು ನೊಂದ ಬಾಲಕಿಗೆ ನೀಡುವಂತೆ ಆದೇಶಿಸಲಾಗಿದೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಆಶಾ ಕೆ.ಎಸ್. ಅವರು ವಾದ ಮಂಡಿಸಿದರು.
ವರದಿ: ಶಿವಕುಮಾರ್ ಮೇಷ್ಟ್ರು ಮನೆ