ಅವರು ಕೃಷ್ಣರಾಜಪೇಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡೆ ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಪಿಯುಸಿ ವ್ಯಾಸಂಗವು ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವಾಗಿದೆ, ಪದವಿಪೂರ್ವ ಶಿಕ್ಷಣದ ನಂತರ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೈದ್ಯಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪಿಯುಸಿ ವ್ಯಾಸಂಗವು ಮಾರ್ಗವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಮುಂಬರುವ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ, ತಂದೆ ತಾಯಿಗಳು ಹಾಗೂ ಗುರು ಹಿರಿಯರಿಗೆ ಕೀರ್ತಿ ತರುವ ಜೊತೆಗೆ ಉತ್ತಮ ಸಾಧನೆ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದು ಶಾಸಕ ಮಂಜು ಕರೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಮಂಡ್ಯ ಜಿಲ್ಲಾ ಉಪ ನಿರ್ದೇಶಕರಾದ ಚೆಲುವಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃಷ್ಣರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಗುಣಮಟ್ಟದ ಶಿಕ್ಷಣ ಹಾಗೂ ಫಲಿತಾಂಶಕ್ಕೆ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುವ ಈ ಶಾಲೆಯಲ್ಲಿ ಪ್ರತಿಭಾವಂತರು ಹೆಚ್ಚಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ತಾವು ಶಾಲೆಯಲ್ಲಿ ಕಲಿತ ಪಾಠಗಳನ್ನು ಮತ್ತೆ ಜ್ಞಾಪಕ ಮಾಡಿಕೊಂಡು ಚೆನ್ನಾಗಿ ಓದುವ ಮೂಲಕ ಪರೀಕ್ಷೆಯಲ್ಲಿ ಅತ್ಯುತ್ತಮವಾದ ಸಾಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ತೋಟಪ್ಪ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ. ಎಸ್ ಕೃಷ್ಣಮೂರ್ತಿ, ತಾಲೂಕು ವಿತರಕರ ಸಂಘದ ಅಧ್ಯಕ್ಷ ಡಾ. ಕೆ.ಎಸ್.ರಾಜೇಶ್, ದಾನಿಗಳಾದ ವೆಂಕಟನಾರಾಯಣ ಶೆಟ್ಟಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಮೋಹನ್, ಉಪ ಪ್ರಾಂಶುಪಾಲ ರವಿ, ಉಪನ್ಯಾಸಕರಾದ ಚಂದ್ರಶೇಖರ್, ಆರ್.ಬಿ. ಪದ್ಮನಾಭ ಸೇರಿದಂತೆ ಮಕ್ಕಳ ಪೋಷಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


