ಧಾರವಾಡ: ಪ್ರಸಕ್ತ ಸಾಲಿನ ಮುಂಗಾರು ಮಳೆಯು ಕೆಲವು ಪ್ರದೇಶಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸುರಿಯದೆ ರೈತರಿಗೆ ಹಾಗೂ ಜನಸಾಮಾನ್ಯರಿಗೆ ತೀವ್ರ ನಿರಾಶೆಯನ್ನುಂಟು ಮಾಡಿದ್ದರೂ, ಮುಂಬರುವ ಹಿಂಗಾರು ಋತುವಿನಲ್ಲಿ ರಾಜ್ಯಾದ್ಯಂತ ಅತ್ಯುತ್ತಮ ಹಾಗೂ ಸಮೃದ್ಧ ಮಳೆಯಾಗಲಿದೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಧಾರವಾಡದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವ ಹಾಗೂ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಹವಾಮಾನ, ಕೃಷಿ ಹಾಗೂ ಪ್ರಕೃತಿಯ ಸ್ಥಿತಿಗತಿಗಳ ಕುರಿತು ಹಲವು ಮಹತ್ವದ ಮುನ್ಸೂಚನೆಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ವಿವರವಾಗಿ ಮಾತನಾಡಿರುವ ಶ್ರೀಗಳು, “ಈ ಹಿಂದೆ ತಿಳಿಸಿದಂತೆ ಮುಂಗಾರು ಮಳೆ ಸಮರ್ಪಕವಾಗಿ ಆಗದೆ ಇದ್ದುದರಿಂದ ರಾಜ್ಯದಲ್ಲಿ ನೀರಿನ ತೀವ್ರ ಅಭಾವ, ಕುಡಿಯುವ ನೀರಿಗಾಗಿ ಪರದಾಟ ಹಾಗೂ ಜನಜೀವನದಲ್ಲಿ ನಾನಾ ಸಂಕಷ್ಟಗಳು ಎದುರಾಗಿದ್ದವು. ಆದರೆ ಈಗ ಮುಂಬರುವ ಹಿಂಗಾರು ಮಳೆ ಅತ್ಯಂತ ಫಲಪ್ರದವಾಗಿ ಸುರಿಯಲಿದೆ. ಇದರಿಂದ ನಾಡಿನಲ್ಲಿ ಸುಭಿಕ್ಷೆ ನೆಲೆಸಲಿದೆ. ಜನರಿಗೆ ಎದುರಾಗಿದ್ದ ಹಿಂದಿನ ಕಷ್ಟ–ನಷ್ಟಗಳು ದೂರವಾಗಿ ನೆಮ್ಮದಿ ಮತ್ತು ಶಾಂತಿ ಸಿಗಲಿದೆ. ಜಲಾಶಯಗಳು ಮರುಪೂರ್ಣಗೊಂಡು ಜಲಚರಗಳಿಗೂ ಒಳಿತಾಗಲಿದೆ” ಎಂದು ವಿವರಿಸಿದ್ದಾರೆ.
ಮುಂಗಾರು ಕೈಕೊಟ್ಟಿದ್ದರಿಂದ ಕಂಗಾಲಾಗಿರುವ ಅನ್ನದಾತರಿಗೆ ಹಿಂಗಾರು ಮಳೆಯು ದೊಡ್ಡ ಮಟ್ಟದ ಆಸರೆಯಾಗಲಿದೆ. ಈ ಮಳೆಯಿಂದಾಗಿ ಕೆರೆ–ಕಟ್ಟೆಗಳು ಹಾಗೂ ಒಣಗಿರುವ ಜಲಮೂಲಗಳು ಭರ್ತಿಯಾಗಲಿದ್ದು, ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬೇಕಿಲ್ಲ. ಹಿಂಗಾರು ಋತುವು ಖಂಡಿತವಾಗಿಯೂ ರೈತರ ಕೈಹಿಡಿಯಲಿದೆ ಎಂದು ಅವರು ಅಭಯ ನೀಡಿದ್ದಾರೆ.
ಕೇವಲ ಮಳೆ ಮತ್ತು ಕೃಷಿಯಷ್ಟೇ ಅಲ್ಲದೆ, ಪ್ರಕೃತಿಯ ಮೇಲಾಗುತ್ತಿರುವ ಮಾನವ ಹಸ್ತಕ್ಷೇಪದ ಬಗ್ಗೆಯೂ ಶ್ರೀಗಳು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ಮನುಷ್ಯನ ಅತಿಯಾದ ಆಸೆಯಿಂದಾಗಿ ಭೂಮಿಯಲ್ಲಿ ವಿಪರೀತ ಬೋರ್ ವೆಲ್ ಗಳನ್ನು ಕೊರೆಯಲಾಗುತ್ತಿದೆ. ಇದರಿಂದ ಭೂಮಿಯ ಒಳಭಾಗದ ತಳಪಾಯ ಸಡಿಲಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಇದು ಜಲಪ್ರಳಯ, ಬೆಟ್ಟ ಕುಸಿತ (ಲ್ಯಾಂಡ್ ಸ್ಲೈಡ್) ಹಾಗೂ ತೀವ್ರ ಸ್ವರೂಪದ ಪ್ರಕೃತಿ ವಿಕೋಪಗಳಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪಗಳ ದುಷ್ಪರಿಣಾಮಗಳಿಂದ ನಾಡನ್ನು ರಕ್ಷಿಸುವಂತೆ ಎಲ್ಲರೂ ಭಗವಂತನಲ್ಲಿ ಪ್ರಾರ್ಥಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ಇದೇ ವೇಳೆ ಧಾರವಾಡದ ಐತಿಹಾಸಿಕ ದಸರಾ ಜಂಬೂ ಸವಾರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಕೋಡಿಮಠದ ಶ್ರೀಗಳು, “ಅಖಂಡ ಕರ್ನಾಟಕ ಒಂದಾಗಿ ಸಾಗಬೇಕು, ಸಮಸ್ತ ಮನುಕುಲಕ್ಕೂ ಒಳ್ಳೆಯದಾಗಬೇಕು ಎಂಬ ಸದುದ್ದೇಶದೊಂದಿಗೆ ಈ ಉತ್ಸವ ನಡೆಯುತ್ತಿದೆ. ಮೈಸೂರಿನಲ್ಲಿ ದಕ್ಷಿಣ ಕರ್ನಾಟಕದ ಸಾಂಸ್ಕೃತಿಕ ಸಂಭ್ರಮವಿದ್ದರೆ, ಉತ್ತರ ಕರ್ನಾಟಕಕ್ಕೆ ಧಾರವಾಡ ದಸರಾ ಅಷ್ಟೇ ಪ್ರಮುಖವಾದ ಅಸ್ಮಿತೆಯಾಗಿದೆ. ಇದು ರಾಜ್ಯದ ಏಕತಾ ಭಾವನೆಯನ್ನು ಬಿಂಬಿಸುತ್ತದೆ” ಎಂದು ಅಭಿಪ್ರಾಯಪಟ್ಟರು. ಮನುಷ್ಯನು ತನ್ನ ಮೂಲ ಮೌಲ್ಯಗಳನ್ನು ಮರೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಿರಿಯರ ಸಂಪ್ರದಾಯಗಳು ಹಾಗೂ ಸಾಂಸ್ಕೃತಿಕ ಹಬ್ಬಗಳು ಸಮಾಜವನ್ನು ಮಾನವೀಯತೆಯೊಂದಿಗೆ ಒಗ್ಗೂಡಿಸಲು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
