ತುಮಕೂರು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ದೇವರಾಯನದುರ್ಗದಲ್ಲಿ ಕಾಡುಮನುಷ್ಯರು ಕಾಣಿಸಿಕೊಂಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಕುತೂಹಲ ಮೂಡಿಸಿತ್ತು. ಬೆಟ್ಟಕ್ಕೆ ಪ್ರವಾಸಕ್ಕೆ ತೆರಳುವವರು ಈ ವಿಡಿಯೋ ಕಂಡು ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಆದರೆ, ಈ ಕುರಿತು ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿರುವುದು ಗಮನ ಸೆಳೆದಿದೆ. ದೇವರಾಯನದುರ್ಗವು ಹಸಿರು ಬೆಟ್ಟಗಳು, ಅರಣ್ಯ ಪ್ರದೇಶ ಮತ್ತು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರವಾಸಿ ತಾಣವಾಗಿದೆ. ವಾರಾಂತ್ಯದಲ್ಲಿ ಕುಟುಂಬದವರು, ಚಾರಣಪ್ರಿಯರು ಹಾಗೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ ಎಂಬ ವಿಡಿಯೋ ಹರಿದಾಡುತ್ತಿದ್ದಂತೆ ಸಾರ್ವಜನಿಕರಲ್ಲಿ ಚರ್ಚೆ ಆರಂಭವಾಗಿತ್ತು.
ವಿಡಿಯೋವನ್ನು ಫ್ಯಾಕ್ಟ್ ಚೆಕ್ ಮಾಡಿದ ಅದು ಸುಳ್ಳು ಸುದ್ದಿ ಹಾಗೂ ಫೇಕ್ ವಿಡಿಯೋ ಎಂಬುದು ತಿಳಿದುಬಂದಿದೆ. ನಂತರ ಪೊಲೀಸರು ಫ್ಯಾಕ್ಟ್ ಚೆಕ್ ವರದಿಯನ್ನು ಜನರ ಮುಂದಿಟ್ಟಿದ್ದಾರೆ. ದೇವರಾಯನ ದುರ್ಗದಲ್ಲಿ ಕಾಡುಜನರು ಕಾಣಿಸಿಕೊಂಡಿದ್ದಾರೆ ಎಂಬುದು ಸುಳ್ಳು ಸುದ್ದಿ. “ತುಮಕೂರು ದೇವರಾಯನದುರ್ಗದಲ್ಲಿ ಯಾವುದೇ ಈ ರೀತಿಯ ಘಟನೆ ನಡೆದಿರುವುದಿಲ್ಲ. ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಬರುವ ಈ ರೀತಿಯ ಯಾವುದೇ ಸುಳ್ಳು ಸುದ್ದಿ ನಂಬಬೇಡಿ” ಎಂದು ಪೋಲಿಸರು ತಿಳಿಸಿದ್ದಾರೆ.
ವೈರಲ್ ದೃಶ್ಯಗಳ ಆಧಾರದ ಮೇಲೆ ಮಾತ್ರ ಯಾವುದೇ ನಿರ್ಧಾರಕ್ಕೆ ಬರಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಡಿಯೋಗಳ ನೈಜತೆ ಮತ್ತು ಅದರ ಹಿಂದಿನ ಸಂದರ್ಭವನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆಯ ಸ್ಪಷ್ಟನೆ ಮಹತ್ವ ಪಡೆದಿದೆ.
ಪ್ರವಾಸಿಗರು ಬೆಟ್ಟ ಪ್ರದೇಶಗಳಿಗೆ ತೆರಳುವಾಗ ಗುರುತಿಸಲಾದ ಮಾರ್ಗಗಳಲ್ಲೇ ಸಂಚರಿಸುವುದು, ಅಪರಿಚಿತ ಅಥವಾ ಅಪಾಯಕಾರಿ ಪ್ರದೇಶಗಳಿಗೆ ಒಬ್ಬರೇ ತೆರಳದಿರುವುದು ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡುವುದು ಸೂಕ್ತ.
ಪ್ರಕೃತಿಯ ಸೌಂದರ್ಯ ಸವಿಯಲು ದೇವರಾಯನದುರ್ಗಕ್ಕೆ ತೆರಳುವವರು ವದಂತಿಗಳಿಗೆ ಆತಂಕಗೊಳ್ಳುವ ಬದಲು ಅಧಿಕೃತ ಮಾಹಿತಿಯನ್ನು ಪರಿಶೀಲಿಸಬೇಕು. ವೈರಲ್ ವಿಡಿಯೋ ನಿಜಕ್ಕೂ ಏನನ್ನು ತೋರಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
