ತುಮಕೂರು: ತುಮಕೂರು ದಸರಾ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಬೈಕ್ ರೈಡ್ ಗೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಅವರ ಪತ್ನಿ ಕನ್ನಿಕಾ ಪರಮೇಶ್ವರಿ ಅವರು ಶನಿವಾರ ನಗರದ ಬಿ.ಜಿ.ಎಸ್. ವೃತ್ತದ ಬಳಿ ಚಾಲನೆ ನೀಡಿದರು.
ಬೈಕ್ ರೈಡ್ ನ ಮುಂದಿನ ಸಾಲಿನಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಕಣ್ಣಿಗೆ ಗಾಗಲ್, ತಲೆಗೆ ಹೆಲ್ಮೆಟ್ ಧರಿಸಿ ರಾಯಲ್ ಎನ್ ಫೀಲ್ಡ್ ಬೈಕನ್ನು ಚಲಾಯಿಸಿದ್ದು ನೋಡುಗರಿಗೆ ಆಶ್ಚರ್ಯ ಮೂಡಿಸಿತು. ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ ಹಾಗೂ ಜೀಪ್ ವಾಹನದಲ್ಲಿ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕಿ ಭಾವನ ಬಸವರಾಜ್ ಅವರೂ ಸಹ ಚಾಲನೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳಿಗೆ ಸಾಥ್ ನೀಡಿದರು.
ಸುಮಾರು 300 ದ್ವಿಚಕ್ರ ವಾಹನಗಳ ಮಹಿಳಾ ಸವಾರರು ಈ ರೈಡ್ ನಲ್ಲಿ ಭಾಗವಹಿಸಿದ್ದರು. ಹೋಂಡಾ ಆಕ್ಟಿವಾ, ಜುಪಿಟರ್, ಡಿಯೋ, ಆಕ್ಸೆಸ್, ಫ್ಯಾಸಿನೋ ಬೈಕ್ ಸವಾರಿ ಮಾಡುತ್ತಾ ಬಿ.ಜಿ.ಎಸ್. ವೃತ್ತದಿಂದ ಅಶೋಕ ರಸ್ತೆ–ಡಿ.ಸಿ.ಕಚೇರಿ–ಕೋತಿತೋಪು ರಸ್ತೆ– ಶಿವಕುಮಾರ ಸ್ವಾಮೀಜಿ ಸರ್ಕಲ್ –ಭದ್ರಮ್ಮ ವೃತ್ತದ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ಸಾಗಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರ ಅಧಿಕಾರಿ, ಸಾರ್ವಜನಿಕರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
