ತುಮಕೂರು: ನಗರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ವೃತ್ತವನ್ನು ತುಮಕೂರು ಸ್ಕ್ವೇರ್ ಆಗಿ ಅಭಿವೃದ್ಧಿ ಪಡಿಸಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ವಿವಿಧ ಮಠಾಧಿಪತಿಗಳು, ಶ್ರೀಗಳ ಭಕ್ತವೃಂದ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಶುಕ್ರವಾರ ಸಂಜೆ ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಜರುಗಿದ ತುಮಕೂರು ಸ್ಕ್ವೇರ್ ವಿರೋಧಿ ಸಭೆಯಲ್ಲಿ ಮಾತನಾಡಿದ ವಿವಿಧ ಶ್ರೀಗಳು, ಭಕ್ತರು, ನಾನಾ ಸಮಾಜಗಳ ಮುಖಂಡರು ಸಿದ್ಧಗಂಗೆಯ ಪೂಜ್ಯ ತ್ರಿವಿಧ ದಾಸೋಹಿಗಳಿಗೆ ಗೌರವಾರ್ಥ ನಗರದ ಹೃದಯಭಾಗದಲ್ಲಿ ನಿರ್ಮಿಸಿರುವ ಡಾ.ಶ್ರೀ ಶಿವಕುಮಾರಸ್ವಾಮೀಜಿ ಹೆಸರಿನ ವೃತ್ತದ ಮಹತ್ವವನ್ನು ತುಮಕೂರು ಸ್ಕ್ವೇರ್ ಹೆಸರಲ್ಲಿ ಕಳೆಯಬಾರದು. ಶ್ರೀಗಳ ಹೆಸರಿನೆ ಸದರಿ ವೃತ್ತಕ್ಕೆ ಡಾ.ಶ್ರೀ.ಶ್ರೀ ಶಿವಕುಮಾರ ಸ್ವಾಮೀಜಿ ಸ್ಕ್ವೇರ್ ಎಂದೇ ನಾಮಕರಣ ಮಾಡಿ ಸ್ವಾಮೀಜಿಗಳ ಸೇವೆಗೆ ಜಾಗತಿಕ ಗೌರವ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ವೀರೆಶೈವ ಸಮಾಜ ಸೇವಾ ಸಮಿತಿ ಸಮಾಜದ ಅಧ್ಯಕ್ಷ ಕೋರಿ ಮಂಜುನಾಥ್ ಮಾತನಾಡಿ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಹೆಸರಿನ ವೃತ್ತವನ್ನು ಆಧುನಿಕವಾಗಿ ಅಭಿವೃದ್ಧಿ ಮಾಡುತ್ತಿರುವ ಜಿಲ್ಲಾಡಳಿತ ಸದರಿ ವೃತ್ತವನ್ನು ತುಮಕೂರು ಸ್ಕ್ವೇರ್ ಆಗಿ ಗುರುತಿಸಲು ಹೊರಟಿರುವುದು ಸ್ವಾಮೀಜಿಗಳ ಭಕ್ತರಿಗೆ ಆಘಾತವನ್ನೂ ತಂದಿದೆ. ಯಾವುದೇ ಕಾರಣಕ್ಕೂ ಸ್ವಾಮೀಜಿಗಳ ಹೆಸರು ಬದಲಾವಣೆ ಮಾಡದೆ ಡಾ.ಶ್ರೀ.ಶ್ರೀ ಶಿವಕುಮಾರ ಸ್ವಾಮೀಜಿಗಳ ಸ್ಕ್ವೇರ್ ಎಂಬ ಹೆಸರಿಸಬೇಕು ಎಂದು ಒತ್ತಾಯಿಸಿದರು.
ಹಿರೆಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೃತ್ತಕ್ಕಿಟ್ಟಿರುವ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರು ಯಾವುದೇ ಕಾರಣಕ್ಕೂ ಬದಲಾಯಿಸಕೂಡದು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್, ಜಿಲ್ಲಾಡಳಿತವನ್ನು ಒತ್ತಾಯಿಸಿ, ಶ್ರೀಗಳ ತ್ರಿವಿಧ ದಾಸೋಹದ ಕಾರಣದಿಂದ ತುಮಕೂರು ಜಗತ್ತಿನಾದ್ಯಂತ ಹೆಸರಡುವಂತಾಗಿದೆ. ತುಮಕೂರೊಗಳ ಮೇಲೆ ಮಠದ ಋಣವಿದೆ. ಹಾಗಾಗಿ ವಿಶ್ವದ ಖ್ಯಾತ ಸ್ಕ್ವೇರ್ಗಳಂತೆ ನಗರದ ಎಸ್.ಎಸ್ ವೃತ್ತಕ್ಕೆ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಸ್ಕ್ವೇರ್ ಎಂದು ಹೆಸರಿಡಬೇಕು ಎಂದು ಆಶಿಸಿದರು.
ಬೆಟ್ಟದಹಳ್ಳಿ ಗಡಿಮಠಾಧ್ಯಕ್ಷ ಡಾ. ಚಂದ್ರಶೇಖರ ಸ್ವಾಮೀಜಿ, ಬೆಳಗಾವಿ ಕಾರಂಜೇಶ್ವರ ಮಠದ ಕಾರದ ಶ್ರೀ ವೀರಬಸವ ಸ್ವಾಮೀಜಿ, ಶಿವಗಂಗೆ ಹೊಸಗವಿ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಹೆಸರನ್ನು ತಗ್ಗಿಸುವ ಯಾವುದೇ ಪ್ರಯತ್ನ ಮಾಡಬಾರದು. ಅಂತಹ ಪ್ರಯತ್ನಗಳಿಗೆ ತೀವ್ರ ವಿರೋಧವಿದೆ ಎಂದರು.
ಬಾಳೆಹೊನ್ನೂರು ಪೀಠದ ರಂಭಾಪುರಿ ಜಗದ್ಗುರುಗಳು, ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಸಂದೇಶ ಕಳಿಸಿ, ಸ್ವಾಮೀಜಿ ಹೆಸರಿನ ವೃತ್ತದ ಹೆಸರು ಬದಲಾವಣೆ ಪ್ರಯತ್ನವನ್ನು ಖಂಡಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಸಿದ್ಧಗಂಗಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್. ಪರಮೇಶ್, ವಿವಿಧ ಸಮಾಜಗಳ ಮುಖಂಡರಾದ ಟಿ.ಆರ್. ಅಂಜನಪ್ಪ, ಡಾ.ಎಸ್. ನಾಗಣ್ಣ, ಟಿ.ಎಲ್. ಕುಂಭಯ್ಯ, ಪಿ.ಮೂರ್ತಿ, ಧನಿಯಾಕುಮಾರ್, ಮಲ್ಲಸಂದ್ರ ಶಿವಣ್ಣ, ಮಂಜೇಶ್ ಒಲಂಪಿಕ್, ರಾಕ್ಲೈನ್ ರವಿಕುಮಾರ್, ಶಾಂತಕುಮಾರ್ ಸೇರಿದಂತೆ ಹಲವಾರು ಸಮಾಜಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ವೃತ್ತದ ಹೆಸರನ್ನು ಬದಲಿಸುತ್ತಿಲ್ಲ; ಆಯುಕ್ತರ ಸ್ಪಷ್ಟನೆ
ಡಾ.ಶಿವಕುಮಾರಸ್ವಾಮೀಜಿ ಅವರ ವೃತ್ತದ ಹೆಸರನ್ನು ಬದಲಿಸಲಾಗುತ್ತಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿರುವ ಪಾಲಿಕೆ ಆಯುಕ್ತ ಶುಭಾ ಅವರ ತುಮಕೂರು ನಗರದ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ವೃತ್ತದಲ್ಲಿ ತುಮಕೂರು ಮಹಾನಗರಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ outdoor LED Display board ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಸದರಿ ವೃತ್ತದ ಹೆಸರನ್ನು ಬದಲಾಯಿಸುವುದಾಗಲಿ ಅಥವಾ ಮರುನಾಮಕರಣ ಮಾಡುವುದಾಗಲಿ ಈ ಕಾಮಗಾರಿಯ ಉದ್ದೇಶವಾಗಿರುವುದಿಲ್ಲ. ಸದರಿ ಕಾಮಗಾರಿಯು ಕೇವಲ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ವೃತ್ತದ ಮೆರುಗನ್ನು ಹೆಚ್ಚಿಸುವುದಕ್ಕೆ ಮಾಡುತ್ತಿರುವ ಕಾಮಗಾರಿಯಾಗಿದ್ದು ಯಾವುದೇ ರೀತಿಯ ಹೆಸರು ಬದಲಾವಣೆ ಮಾಡಲಾಗುವುದಿಲ್ಲವೆಂದು ಈ ಮೂಲಕ ಸ್ಪಷ್ಟಿಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರಮೇಶ್ವರ್ ಅವರೇ ಭಕ್ತರು ಸಹಿಸೋಲ್ಲ; ಜಿ.ಎಸ್.ಬಿ
ಮಾಜಿ ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರೇ, ತುಮಕೂರು ನಗರ ಪ್ರಪಂಚದಲ್ಲಿ ಹೆಸರಾಗಿದ್ದರೆ ಅದು ಡಾ. ಶಿವಕುಮಾರ್ ಸ್ವಾಮೀಜಿಗಳಿಂದ ಮಾತ್ರ. ಸ್ವಾಮೀಜಿಗಳ ಹೆಸರು ಕೈಬಿಟ್ಟು ವೃತ್ತದ ಹೆಸರು ಬದಲಾಯಿಸಿ ಸ್ವಾಮೀಜಿಗಳ ಗೌರವಕ್ಕೆ ಧಕ್ಕೆ ತರಬೇಡಿ, ಭಕ್ತರು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
