ವಿಶ್ವದ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಹೆಸರಿನಲ್ಲಿ ನಕಲಿ ಆ್ಯಪ್ ವೊಂದು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ, ಈ ಆ್ಯಪ್ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಬಾರಿ ಡೌನ್ ಲೋಡ್ ಆಗಿದ್ದು, ಅಧಿಕೃತ ವಾಟ್ಸಾಪ್ ಗಿಂತ ಮೇಲ್ಭಾಗದಲ್ಲಿ ಪ್ರಾಯೋಜಿತ ಜಾಹೀರಾತಿನ ರೂಪದಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಅಸಲಿ ಆ್ಯಪ್ ಹುಡುಕುವ ಬಳಕೆದಾರರು ಮೋಸಹೋಗುವ ಅಪಾಯ ಎದುರಾಗಿದೆ.
ರೆಡ್ಡಿಟ್ ಬಳಕೆದಾರರೊಬ್ಬರು ಈ ನಕಲಿ ಆ್ಯಪ್ ಬಗ್ಗೆ ಗಮನ ಸೆಳೆದ ಬಳಿಕ, ‘ಆಂಡ್ರಾಯ್ಡ್ ಅಥಾರಿಟಿ’ ಮತ್ತು ‘ದಿ ವರ್ಜ್’ ತಂತ್ರಜ್ಞಾನ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ. ವರದಿಗಳ ಪ್ರಕಾರ, ಸುದ್ದಿ ಪ್ರಕಟವಾಗುವವರೆಗೂ ನಕಲಿ ಆ್ಯಪ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿತ್ತು.
ನಕಲಿ ಆ್ಯಪ್ ಗೆ ‘WhatsApp Messenger’ ಎಂದೇ ಹೆಸರಿಡಲಾಗಿತ್ತು. ಅಷ್ಟೇ ಅಲ್ಲದೆ, ಅಧಿಕೃತ ಆ್ಯಪ್ ನ ಲೋಗೋ, ಸ್ಕ್ರೀನ್ ಶಾಟ್ ಗಳು ಮತ್ತು ವಿವರಣೆಯನ್ನೂ ನಕಲು ಮಾಡಲಾಗಿತ್ತು. ಹೀಗಾಗಿ, ಹೆಸರನ್ನಷ್ಟೇ ಅಥವಾ ಲೋಗೋವನ್ನಷ್ಟೇ ನೋಡಿ ಆ್ಯಪ್ ಡೌನ್ ಲೋಡ್ ಮಾಡುವವರು ಮೋಸಹೋಗುವ ಸಾಧ್ಯತೆಯಿದೆ.
ಈ ಆ್ಯಪ್ ‘Agment Assets sallu’ ಎಂಬ ಡೆವಲಪರ್ ಹೆಸರಿನಲ್ಲಿ ಪ್ರಕಟವಾಗಿತ್ತು ಎಂದು ವರದಿಗಳು ತಿಳಿಸಿವೆ. ಅಧಿಕೃತ ವಾಟ್ಸಾಪ್ ನ ಪ್ರಕಾಶಕ ಸಂಸ್ಥೆಗೂ ಈ ಡೆವಲಪರ್ ಗೂ ವ್ಯತ್ಯಾಸವಿರುವುದರಿಂದ, ಆ್ಯಪ್ ಸ್ಥಾಪಿಸುವ ಮೊದಲು ಪ್ರಕಟಕರ ಹೆಸರನ್ನು ಪರಿಶೀಲಿಸುವುದು ಮುಖ್ಯ.
ಅಸಲಿ ಮತ್ತು ನಕಲಿ ವಾಟ್ಸಾಪ್ ಗುರುತಿಸುವುದು ಹೇಗೆ?
- ಮೆಟಾ ಸಂಸ್ಥೆಯ ಅಧಿಕೃತ ವಾಟ್ಸಾಪ್ ಮೆಸೆಂಜರ್ ಅನ್ನು ‘WhatsApp LLC’ ಎಂಬ ಡೆವಲಪರ್ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಆ್ಯಪ್ ನ ಹೆಸರನ್ನು ಮಾತ್ರ ನೋಡಿ ನಿರ್ಧರಿಸುವ ಬದಲು, ಕೆಳಗಿನ ಅಂಶಗಳನ್ನು ಗಮನಿಸಿ.
- ಡೆವಲಪರ್ ಹೆಸರು: ಅಧಿಕೃತ ವಾಟ್ಸಾಪ್ ಗೆ ‘WhatsApp LLC’ ಎಂದು ತೋರಿಸುತ್ತದೆಯೇ ಎಂದು ಪರಿಶೀಲಿಸಿ.
- ಡೌನ್ ಲೋಡ್ ಗಳ ಸಂಖ್ಯೆ: ಅಧಿಕೃತ ಆ್ಯಪ್ ನ ಡೌನ್ ಲೋಡ್ ಗಳು ಮತ್ತು ವಿಮರ್ಶೆಗಳ ಸಂಖ್ಯೆಯನ್ನು ಗಮನಿಸಿ.
- ಪ್ರಾಯೋಜಿತ ಜಾಹೀರಾತು: ಹುಡುಕಾಟದಲ್ಲಿ ಮೊದಲ ಸ್ಥಾನದಲ್ಲಿದೆ ಎಂಬ ಕಾರಣಕ್ಕೆ ಆ್ಯಪ್ ಅಧಿಕೃತವೆಂದು ಭಾವಿಸಬೇಡಿ.
- ಅನುಮತಿಗಳು: ಆ್ಯಪ್ ಕೇಳುವ ಮೊಬೈಲ್ ಅನುಮತಿಗಳು ಅದರ ಕಾರ್ಯಕ್ಕೆ ಅಗತ್ಯವಿದೆಯೇ ಎಂದು ಪರಿಶೀಲಿಸಿ.
ಈಗಾಗಲೇ ನಕಲಿ ಆ್ಯಪ್ ಡೌನ್ ಲೋಡ್ ಮಾಡಿದ್ದೀರಾ?
ನಿಮ್ಮ ಮೊಬೈಲ್ ನಲ್ಲಿ ಈ ನಕಲಿ ಆ್ಯಪ್ ಇದ್ದರೆ, ಅದನ್ನು ತೆರೆಯದೆ ಅನ್ ಇನ್ ಸ್ಟಾಲ್ ಮಾಡಿ. ನಂತರ ಮೊಬೈಲ್ ನ ಸೆಟ್ಟಿಂಗ್ಸ್ ನಲ್ಲಿ ಆ್ಯಪ್ ಗೆ ನೀಡಿರುವ ಅನುಮತಿಗಳನ್ನು ಪರಿಶೀಲಿಸಿ. ಆ್ಯಪ್ ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ, ವಾಟ್ಸಾಪ್ ಪರಿಶೀಲನಾ ಕೋಡ್ ಅಥವಾ ಒಟಿಪಿ ನಮೂದಿಸಿದ್ದರೆ, ತಕ್ಷಣವೇ ನಿಮ್ಮ ಖಾತೆಯ ಸುರಕ್ಷತೆಯನ್ನು ಪರಿಶೀಲಿಸಿ. ವಾಟ್ಸಾಪ್ ನ ಎರಡು ಹಂತದ ಪರಿಶೀಲನೆ (Two–step verification) ಸಕ್ರಿಯಗೊಳಿಸುವುದೂ ಸಹಾಯಕ. ಪರಿಶೀಲನಾ ಕೋಡ್ ಅಥವಾ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಗಮನಿಸಿ: ಗೂಗಲ್ ಪ್ಲೇ ಸ್ಟೋರ್ನಲ್ಲಿರುವ ಎಲ್ಲ ಆ್ಯಪ್ಗಳೂ ಅಧಿಕೃತವಾಗಿರುತ್ತವೆ ಎಂದು ಭಾವಿಸಬಾರದು. ಆ್ಯಪ್ನ ಹೆಸರು, ಪ್ರಕಟಕರ ವಿವರಗಳು ಮತ್ತು ವಿಶ್ವಾಸಾರ್ಹ ಮೂಲಗಳನ್ನು ಪರಿಶೀಲಿಸಿ ಡೌನ್ಲೋಡ್ ಮಾಡುವುದೇ ಸುರಕ್ಷಿತ ಕ್ರಮ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
